'ಮಾಲೆಗಾಂವ್-2' ಮಹಾಸಂಚು ವಿಫಲ: ಎಟಿಎಸ್‌ ನಿಂದ ಶಂಕಿತ ‘ಕೇಸರಿ ಉಗ್ರ’ನ ಸೆರೆ

Update: 2018-08-10 17:19 GMT

ಮುಂಬೈ, ಆ.10: ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ವು ಸನಾತನ ಸಂಸ್ಥೆಗೆ ಸೇರಿದ ವ್ಯಕ್ತಿಯೊಬ್ಬನನ್ನು ಬಂಧಿಸಿ ಆತನ ಮನೆಯಿಂದ ಭಾರೀ ಪ್ರಮಾಣದ ಸ್ಫೋಟಕಗಳನ್ನು, ಬಾಂಬ್ ತಯಾರಿಸಲು ಬಳಸುವ ಸಾಮಗ್ರಿ ಹಾಗೂ ಎಂಟು ಕಚ್ಛಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ತಿಳಿಸಿದೆ.

ಸನಾತನ ಸಂಸ್ಥೆಯ ಸದಸ್ಯ ವೈಭವ್ ರಾವತ್ ಬಂಧಿತ ವ್ಯಕ್ತಿ. ಮುಂಬೈ ನಲಸೋಪಾರ(ಪಶ್ಚಿಮ)ದ ಸೊಪಾರ ಎಂಬಲ್ಲಿರುವ ವೈಭವ್‌ನ ಮನೆಗೆ ಎಟಿಎಸ್ ದಳದವರು ವಿಧಿವಿಜ್ಞಾನ ತಜ್ಞರು ಹಾಗೂ ಶ್ವಾನದಳದೊಂದಿಗೆ ಗುರುವಾರ ರಾತ್ರಿ ದಾಳಿ ನಡೆಸಿ ಶೋಧ ನಡೆಸಿದಾಗ ಮನೆಯ ನೆಲ ಅಂತಸ್ತಿನಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಕೆಲವು ಸಾಹಿತ್ಯಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

ಆದರೆ ರಾವತ್ ತಮ್ಮ ಸಂಘಟನೆಯ ಸದಸ್ಯನಲ್ಲ ಎಂದು ಸನಾತನ ಸಂಸ್ಥೆ ಹೇಳಿದೆ. ಹಿರಿಯ ಐಪಿಎಸ್ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಐಟಿಎಸ್ ತಂಡ ಗುರುವಾರ ತಡರಾತ್ರಿ ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ಶುಕ್ರವಾರ ಬೆಳಗ್ಗಿನವರೆಗೂ ಮುಂದುವರಿದಿತ್ತು. ರಾವತ್ ಮೇಲೆ ಹಲವು ದಿನಗಳಿಂದ ನಿಗಾ ಇರಿಸಲಾಗಿತ್ತು. ರಾವತ್ ಮನೆಯಿಂದ ವಶಕ್ಕೆ ಪಡೆಯಲಾಗಿರುವ ಸ್ಫೋಟಕಗಳನ್ನು ಮುಂಬೈಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಸ್ಫೋಟಕಗಳ ಮೂಲ ಹಾಗೂ ಇದನ್ನು ಯಾವ ಉದ್ದೇಶಕ್ಕೆ ಬಳಸಲು ರಾವತ್ ಯೋಜನೆ ಹಾಕಿಕೊಂಡಿದ್ದ ಎಂಬುದನ್ನು ತಿಳಿದುಕೊಳ್ಳಲು ರಾವತ್‌ನನ್ನು ಕಸ್ಟಡಿಗೆ ಪಡೆಯುವ ಅಗತ್ಯವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾವತ್ (40 ವರ್ಷ) ಕಳೆದ ಆರು ವರ್ಷಗಳಿಂದ ಸನಾತನ ಸಂಸ್ಥೆಯ ಜೊತೆ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈತ ವಾಸಿಸುತ್ತಿದ್ದ ಫ್ಲಾಟ್ ಮತ್ತು ಈತನ ರಿಯಲ್ ಎಸ್ಟೇಟ್ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆದಿದ್ದು, ಸ್ಥಳೀಯ ನಿರ್ಮಿತ ಕಚ್ಛಾಬಾಂಬ್ ಈತನ ಪ್ಲಾಟ್‌ನಲ್ಲಿ ಪತ್ತೆಯಾಗಿದ್ದರೆ, ಗನ್ ಪೌಡರ್ ಹಾಗೂ ಡಿಟೊನೇಟರ್‌ಗಳನ್ನು ರಾವತ್ ತನ್ನ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಅಂಗಡಿಯೊಂದರಲ್ಲಿ ಶೇಖರಿಸಿಡಲಾಗಿತ್ತು ಎನ್ನಲಾಗಿದೆ. ಈ ಮಧ್ಯೆ ಹೇಳಿಕೆ ನೀಡಿರುವ ಸನಾತನ ಸಂಸ್ಥೆಯ ವಕೀಲ ಸಂಜೀವ್ ಪುನೆಲಿಕರ್, “ರಾವತ್ ಸನಾತನ ಸಂಸ್ಥೆಯ ಸದಸ್ಯನಲ್ಲ, ಆದರೆ ಹಿಂದು ಸಂಘಟನೆಯ ಕಾರ್ಯಕರ್ತನಾಗಿದ್ದು, ತಮ್ಮ ಸಂಸ್ಥೆಯ ಸದಸ್ಯರಿಗೆ ಪರಿಚಿತನಾಗಿದ್ದಾನೆ. ಗೋಮಾಂಸ ಕುರಿತ ಪ್ರಕರಣವೊಂದರಲ್ಲಿ ಅವರನ್ನು ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲಾ ಪೊಲೀಸರು ಗಡೀಪಾರು ಮಾಡಿದ್ದರು. ಆದರೆ ಅವರ ಮನೆಯಲ್ಲಿ ಸ್ಫೋಟಕಗಳಿದ್ದವು ಎಂಬ ಐಟಿಎಸ್ ಹೇಳಿಕೆಯ ಬಗ್ಗೆ ಸಂಶಯವಿದೆ” ಎಂದಿದ್ದಾರೆ.

ರಾವತ್ ಬಂಧನವನ್ನು ಖಂಡಿಸಿರುವ ಹಿಂದು ಜನಜಾಗೃತಿ ಸಮಿತಿ(ಎಚ್‌ಜೆಎಸ್)ಯ ರಾಜ್ಯ ಸಮಿತಿ ಸಂಯೋಜಕ ಸುನಿಲ್ ಗಣಾವತ್, “ರಾವತ್ ಓರ್ವ ಧೈರ್ಯಶಾಲಿ ಗೋರಕ್ಷಕರಾಗಿದ್ದರು. ಹಿಂdU ಗೋವಂಶ ರಕ್ಷಾ ಸಮಿತಿಯ ಕಾರ್ಯಕರ್ತರಾಗಿರುವ ಅವರು ಗೋರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರ ಬಂಧನದ ಬಳಿಕ ಹರಡಿರುವ ವದಂತಿಗಳನ್ನು ಗಮನಿಸಿದರೆ ಮಾಲೆಗಾಂವ್ -11 ಪ್ರಕರಣ ಇದಾಗಿರುವ ಸಂಶಯವಿದೆ. ಹಿಂದು ಸಂಘಟನೆಯ ಕಾರ್ಯಕರ್ತರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಲೆಗಾಂವ್ ಪ್ರಕರಣದಲ್ಲಿ ನಡೆದಿದೆ” ಎಂದು ಹೇಳಿದ್ದಾರೆ.

ಗೌರಿ ಲಂಕೇಶ್, ದಾಭೋಲ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆಗಳಲ್ಲೂ ಸನಾತನ ಸಂಸ್ಥೆಯ ಮೇಲೆ ಆರೋಪ

ಸನಾತನ ಸಂಸ್ಥೆಯ ಸದಸ್ಯರನ್ನು ಈ ಹಿಂದೆ ವಾಶಿ, ಥಾಣೆ, ಪನ್ವೇಲ್(ಎಲ್ಲವೂ 2007ರಲ್ಲಿ) ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣ, 2009ರಲ್ಲಿ ಗೋವಾದಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣ, ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ (2013), ಗೋವಿಂದ ಪನ್ಸಾರೆ ಮತ್ತು ಎಂಎಂ ಕಲ್ಬುರ್ಗಿ (2015ರಲ್ಲಿ), ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ (2017ರಲ್ಲಿ) ಹತ್ಯೆ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಅಲ್ಲದೆ ಈ ಪ್ರಕರಣಗಳ ತನಿಖೆ ಸಂದರ್ಭ ಸನಾತನ ಸಂಸ್ಥೆಯ ಸ್ಥಾಪಕ ಜಯಂತ್ ಬಾಲಾಜಿಯನ್ನು ಸಿಬಿಐ ಹಾಗೂ ಮಹಾರಾಷ್ಟ್ರ ಪೊಲೀಸರು ವಿಚಾರಣೆ ನಡೆಸಿದ್ದರು.

2009ರ ಗೋವಾ ಸ್ಪೋಟದಲ್ಲೂ ಸನಾತನ ಸಂಸ್ಥೆಯ ಸದಸ್ಯರ ಮೇಲೆ ಶಂಕೆ

2009ರಲ್ಲಿ ಗೋವಾದಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದಲ್ಲೂ ಸನಾತನ ಸಂಸ್ಥೆಯ ಸದಸ್ಯರು ಆರೋಪಿಗಳಾಗಿದ್ದು, 6 ಸದಸ್ಯರನ್ನು ಬಂಧಿಸಲಾಗಿತ್ತು. ದೀಪಾವಳಿಯ ಮುನ್ನಾ ದಿನ ಮಾರ್ಗೋವಾದಲ್ಲಿ ನರಕಾಸುರನ ಪ್ರತಿಕೃತಿ ದಹಿಸುವ ಕಾರ್ಯಕ್ರಮದ ಸ್ಥಳಕ್ಕೆ ಸ್ಫೋಟಕಗಳನ್ನು ಸ್ಕೂಟರ್‌ನಲ್ಲಿ ಇರಿಸಿಕೊಂಡು ಬರುತ್ತಿದ್ದ ಸಂದರ್ಭ ಅಕಾಸ್ಮಾತ್ ಸ್ಫೋಟಕ ಸಿಡಿದ ಕಾರಣ ಸ್ಕೂಟರ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದರು. ಈ ಪ್ರಕರಣದಲ್ಲಿ ಇತರ ಆರು ಮಂದಿ ಸದಸ್ಯರನ್ನು ಬಂಧಿಸಲಾಗಿತ್ತು.

ಮತ್ತೆ ಇಬ್ಬರ ಬಂಧನ

ಸನಾತನ ಸಂಸ್ಥೆಯ ಕಾರ್ಯಕರ್ತ ವೈಭವ್ ರಾವತ್ ಮನೆಯ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದಲ್ಲಿ ಸ್ಫೋಟಕ ವಸ್ತು ಹಾಗೂ 8 ಕಚ್ಛಾ ಬಾಂಬ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಎಟಿಎಸ್ ಶುಕ್ರವಾರ ಮತ್ತಿಬ್ಬರನ್ನು ಪುಣೆ ಮತ್ತು ಪಾಲ್ಘಾರ್‌ನಲ್ಲಿ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾವತ್ ಸೇರಿದಂತೆ ಬಂಧಿತ ಮೂವರನ್ನೂ ಸೆಷನ್ಸ್ ನ್ಯಾಯಾಲಯದೆದುರು ಹಾಜರುಪಡಿಸಲಾಗಿದ್ದು ಅವರಿಗೆ ಆಗಸ್ಟ್ 18ರವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಪುಣೆ ಮತ್ತು ಔರಂಗಾಬಾದ್‌ಗಳಲ್ಲಿ ದಾಳಿ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿ ತಿಳಿಸಿದೆ.

ಹೇಳಿಕೆ: ಸಮಾಜಕ್ಕೆ ಅಂಟಿಕೊಂಡಿರುವ ಕ್ಯಾನ್ಸರ್‌ ನಂತಿರುವ ಸನಾತನ ಸಂಸ್ಥೆಯಂತಹ ಸಂಘಟನೆಗಳನ್ನು ನಿಷೇಧಿಸಬೇಕು. 2009ರಲ್ಲಿ ಗೋವಾದಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಸದಸ್ಯರು ಶಾಮೀಲಾಗಿರುವುದು ತಿಳಿದುಬಂದೊಡನೆ ಆ ಸಂಸ್ಥೆಯನ್ನು ನಿಷೇಧಿಸಿದ್ದರೆ ಗೌರಿ ಲಂಕೇಶ್, ದಾಭೋಳ್ಕರ್, ಪನ್ಸಾರೆ, ಕಲ್ಬುರ್ಗಿ ಮುಂತಾದ ವಿಚಾರವಾದಿಗಳ ಹತ್ಯೆಯಾಗುತ್ತಿರಲಿಲ್ಲ

ಗೋವಾ ಸಾಹಿತಿ ದಾಮೋದರ್ ವೌಜೊ ಇತ್ತೀಚೆಗೆ ನೀಡಿದ್ದ ಹೇಳಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News