ಕೇಂದ್ರ ಸಚಿವ ಗೋಹೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಗುವಾಹತಿ, ಆ. 10: ನಾಗಾಂವ್ ಜಿಲ್ಲಿಯಲ್ಲೆ 24 ವರ್ಷದ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಕೇಂದ್ರದ ರೈಲ್ವೆ ಖಾತೆಯ ಸಹಾಯಕ ಸಚಿವ ರಜೇನ್ ಗೋಹೈನ್ ಅವರ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳೆ ಹಾಗೂ ಅವರ ಕುಟುಂಬದ ವಿರುದ್ಧ ಬ್ಲಾಕ್‌ಮೇಲ್ ಮಾಡಿರುವುದಾಗಿ ಗೋಹೈನ್ ಕೂಡ ದೂರು ದಾಖಲಿಸಿದ್ದಾರೆ ಎಂದು ಹೇಳಿರುವ ಸಚಿವರ ವಿಶೇಷ ಕರ್ತವ್ಯ ನಿರತ ಅಧಿಕಾರಿ ಸಂಜೀವ್ ಗೋಸ್ವಾಮಿ, ಸಚಿವರ ವಿರುದ್ಧದ ದೂರನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ದೂರು ಹಿಂದೆಗೆದ ಬಗ್ಗೆ ಪ್ರಶ್ನಿಸಿದಾಗ ನಾಗಾಂವ್ ಪೋಲ್ ಠಾಣೆಯ ಉಸ್ತುವಾರಿ ಅಧಿಕಾರಿ ಅನಂತ ದಾಸ್, ದೂರನ್ನು ನ್ಯಾಯಾಲಯದಿಂದ ಹಿಂದೆ ತೆಗೆಯಿರಿ ಎಂದು ಮಹಿಳೆ ಮನವಿ ಮಾಡಿದ್ದಾರೆ. ಆದರೆ, ಪ್ರಕರಣ ಈಗಲೂ ಇದೆ. ನಾವು ನಮ್ಮ ನಮ್ಮ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ನಾಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಿದ ಬಳಿಕ ಆಗಸ್ಟ್ 2ರಂದು ಗೋಹೈನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನಾಗಾಂವ್ ಉಪ ಪೊಲೀಸ್ ಅಧೀಕ್ಷಕ (ಕೇಂದ್ರ ಕಚೇರಿ) ಸಬಿತಾ ದಾಸ್ ಹೇಳಿದ್ದಾರೆ. ‘‘ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆಯನ್ನು ಈಗಾಗಲೇ ಆರಂಭಿಸಿದ್ದೇವೆ. ನಾವು ಕಾನೂನಿನಂತೆ ಮುಂದುವರಿಯಲಿದ್ದೇವೆ’’ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಪ್ರಕರಣದ ಯಾವುದೇ ವಿವರಗಳನ್ನು ಹಂಚಿಚಿಕೊಳ್ಳಲು ಅವರು ನಿರಾಕರಿಸಿದ್ದಾರೆ.