ಆ.12: ಹಾಜಿ ಅಬ್ದುಲ್ಲಾ ಸ್ಮರಣಾರ್ಥ ರಕ್ತದಾನ ಶಿಬಿರ

Update: 2018-08-11 12:15 GMT

ಮಂಗಳೂರು, ಆ.11: ಹಾಜಿ ಅಬ್ದುಲ್ಲಾ ಟ್ರಸ್ಟ್, ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಕಾರ್ಪೊರೇಷನ್ ಬ್ಯಾಂಕ್ ಉಡುಪಿ ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಹಾಗೂ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೆಶನ್, ಉಡುಪಿ ಟೌನ್ ಕೋ-ಆಪರೇಟಿವ್ ಬ್ಯಾಂಕ್ ಇವುಗಳ ಆಶ್ರಯದಲ್ಲಿ ಹಾಜಿ ಅಬ್ದುಲ್ಲಾ ಸ್ಮರಣಾರ್ಥ ಆ.12ರಂದು ಬೆಳಗ್ಗೆ 9:30ಕ್ಕೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಅಂದು ಬೆಳಗ್ಗೆ 10 ಗಂಟೆಗೆ ಆಸ್ಪತ್ರೆಯ ಕಮಲ್ ಎ. ಬಾಳಿಗಾ ಹಾಲ್‌ನಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಜಿ ಅಬ್ದುಲ್ಲಾ ಕುರಿತು ಪ್ರಕಟಿತ ಕೃತಿಯ ಲೇಖಕ ಹಾಗೂ ನಿವೃತ್ತ ಪ್ರಾಧ್ಯಾಪಕ ಮುರುಳೀಧರ ಉಪಾಧ್ಯಾಯ, ಕಾರ್ಪೊರೇಷನ್ ಬ್ಯಾಂಕ್‌ನ ಡೆಪ್ಯುಟಿ ರೆನಲ್ ಮುಖ್ಯಸ್ಥ ಕೆ.ಎಸ್. ಶ್ಯಾನಭೋಗ್, ಮನೋರೋಗ ತಜ್ಞ ಡಾ.ಪಿ.ವಿ. ಭಂಡಾರಿ, ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಾಮದಾಸ್ ಪ್ರಭು ಭಾಗವಹಿಸಲಿದ್ದಾರೆ.

ಸಂಸ್ಮರಣೆಯ ಬಳಿಕ ಮಹಾತ್ಮಗಾಂಧಿ ಮೈನ್ ಶಾಲೆಯ ಪ್ರತಿಭಾವಂತ ನಾಲ್ವರು ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಅಲ್ಲದೆ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬಡವರ ಏಳಿಗೆಗಾಗಿ ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್ ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಅಬ್ದುಲ್ಲಾ ಹಾಜಿ ತಮ್ಮ ಸ್ವಂತ ಜಮೀನನ್ನು ಅಸ್ಪತ್ರೆ, ಶಾಲೆ ನಿರ್ಮಿಸಲು ದಾನವಾಗಿ ನೀಡಿ ಗಮನ ಸೆಳೆದಿದ್ದರು. ಅಂತಹ ಮೇಧಾವಿಯು ಯುವ ಜನಾಂಗಕ್ಕೆ ಅಪರಿಚಿತವಾಗಬಾರದು ಎಂಬ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸಲುವಾಗಿ ಟ್ರಸ್ಟ್ ರಚಿಸಲಾಗಿದೆ. ಕಳೆದ ವರ್ಷ ಹಾಜಿ ಅಬ್ದುಲ್ಲಾರ ಸಂಸ್ಮರಣ ದಿನವನ್ನು ಆಚರಿಸಿದ್ದ ಟ್ರಸ್ಟ್ ಈ ಬಾರಿ ಸಂಸ್ಮರಣೆಯೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಂಡಿದೆ ಎಂದು ಸಿರಾಜ್ ಅಹ್ಮದ್ ಹಾಗೂ ಇಕ್ಬಾಲ್ ಮನ್ನಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News