ಕೋಮುವಾದ ಸಂವಿಧಾನ ವಿರೋಧಿ ಮಾತ್ರವಲ್ಲ ಮನುಷ್ಯ ವಿರೋಧಿ ಕೂಡಾ: ದಿನೇಶ್ ಅಮೀನ್‌ ಮಟ್ಟು

Update: 2018-08-11 10:48 GMT

ಮಂಗಳೂರು, ಆ.11: ಕೋಮುವಾದ ಕೇವಲ ಸಂವಿಧಾನ ವಿರೋಧಿ ಮಾತ್ರವಲ್ಲ, ಬದಲಾಗಿ ಅದು ಮನುಷ್ಯ ಹಾಗೂ ಅಭಿವೃದ್ಧಿ ವಿರೋಧಿ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಿಸಿದ್ದಾರೆ.

ಪುಸ್ತಕಗಳ ಓದಿನ ಮೂಲಕ ಅರಿವಿನ ಪಯಣ ನಡೆಸುತ್ತಿರುವ ‘ಕೋಶ ಓದು ದೇಶ ನೋಡು ಬಳಗ’ದ ಅಭಿಯಾನದ ಭಾಗವಾಗಿ ಆ. 11 ಮತ್ತು 12ರಂದು ನಗರದಲ್ಲಿ ಎರಡು ದಿನಗಳ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಧರ್ಮವನ್ನು ವಿರೋಧಿಸದೆ ಕೋಮುವಾದವನ್ನು ವಿರೋಧಿಸುವುದು ಹೇಗೆ ಎಂಬುದು ನಮ್ಮ ಮುಂದಿರುವ ಸವಾಲು. ಕೋಮುವಾದ ವಿರೋಧಿಸುವಾತ ಧರ್ಮವಿರೋಧಿಯಾಗಿ ಕಾಣುತ್ತಾನೆ. ಆದು ಆಗದಂತೆ ನೋಡಿಕೊಳ್ಳಬೇಕು. ಜೊತೆಗೆ ಮುಖಗಳು ಮತ್ತು ಮುಖವಾಡಗಳ ನಡುವಿನ ವ್ಯತ್ಯಾಸ, ನಿಜರೂಪವನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ನಾವಿಂದು ಮಾಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಕೋಮುವಾದ ಇಂದು ವ್ಯಾಪಕವಾಗಿ ಬೆಳೆಯಲು ಸೈದ್ಧಾಂತಿಕವಾದ ಗಟ್ಟಿತನ ಇಲ್ಲದಿರುವುದಾಗಿದೆ. ಕೋಮುವಾದ, ಹಿಂದುತ್ವ ವಿಜೃಂಭಿಸಿದಾಗ ರಾಜಕೀಯ ಪಕ್ಷಗಳು ಮೆದು ಹಿಂದುತ್ವದ ಕಡೆಗೆ ವಾಲುತ್ತವೆಯೇ ಹೊರತು ಸಿದ್ಧಾಂತವನ್ನು ಗಟ್ಟಿಯಾಗಿ ಪ್ರತಿಪಾದಿಸುವುದಿಲ್ಲ. ಈ ವಿಷಯದಲ್ಲಿ ಕರುಣಾನಿಧಿ ಸೈದ್ಧಾಂತಿಕ ನಿಲುವಿಗೆ ಗಟ್ಟಿಯಾಗಿದ್ದ ರಾಜಕಾರಣಿ ಎಂದು ಹೇಳಿದರು.

ದೇಶ ನೋಡಿದ ಮಾತ್ರಕ್ಕೆ, ಕೋಶ ಓದಿದ ಮಾತ್ರಕ್ಕೆ ಸಜ್ಜನರಾಗಲು ಸಾಧ್ಯವಿಲ್ಲ. ಆದರೆ ಸಾಹಿತ್ಯ, ಸಂಸ್ಕೃತಿಯ ಜತೆ, ಸಂಗೀತ ಆಸಕ್ತಿ ಇರುವವರು ಹೆಚ್ಚು ಕೆಟ್ಟು ಹೋಗಲಾರರು. ನಮಗಿಂದು ಕ್ರಾಂತಿಕಾರಿಗಳು, ಬಂಡಾಯಗಾರರು ಬೇಕಾಗಿಲ್ಲ. ಬದಲಿಗೆ ಸತ್ಯವನ್ನು ಸರಿಯಾಗಿ ಗ್ರಹಿಸಿದವರನ್ನು ದೊಡ್ಡ ಸಮುದಾಯವನ್ನು ನಾವಿಂದು ಸೃಷ್ಟಿಸಬೇಕಾಗಿದೆ. ಸಾಹಿತ್ಯದ ಓದು ವಿಭಿನ್ನ ಅನುಭವದ ಲೋಕವನ್ನು ಪರಿಚಯಿಸುತ್ತದೆ. ಇತಿಹಾಸದಿಂದ ಒಂದಷ್ಟು ಪಾಠ ಕಲಿಯಬೇಕಾಗಿದೆ. ಅದಕ್ಕಾಗಿ ಇತಿಹಾಸವನ್ನು ಓದುವುದು ಅಗತ್ಯವಾಗಿದೆ ಎಂದು ಅಮೀನ್ ಮಟ್ಟು ಹೇಳಿದರು.

ಇತಿಹಾಸ, ಸಮಾಜಶಾಸ್ತ್ರ ಮತ್ತು ಸಾಹಿತ್ಯದ ಬಗ್ಗೆ ಇಂದಿನ ಬಹುತೇಕ ಯುವ ಸಮುದಾಯದ ಜ್ಞಾನದ ಮಟ್ಟ ಬರೇ ಎಸೆಸೆಲ್ಸಿಯವರೆಗೆ. ಬಳಿಕ ಸುಖ ನೆಮ್ಮದಿಯ ಜೀವನಕ್ಕಾಗಿ ಓದುವುದನ್ನು ಮಾತ್ರವೇ ಮುಂದುವರಿಸಲಾಗುತ್ತದೆ. 25 ವರ್ಷಗಳ ಹಿಂದಿನ ಆರೆಸ್ಸೆಸ್ ನಾಯಕರ ಜತೆ ಮಾತನಾಡುವುದು, ಚರ್ಚಿಸುವುದು ಸಾಧ್ಯವಾಗಿತ್ತು. ಆದರೆ ಇಂದಿನ ಭಕ್ತರ ಜತೆ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. ಅವರ ಇತಿಹಾಸದ ಅರಿವಿನ ಮಟ್ಟ ಎಸೆಸೆಲ್ಸಿವರೆಗೆ ಮಾತ್ರದ್ದಾಗಿದೆ. ಇದು ಅಪಾಯಕಾರಿ ಎಂದು ಅಮೀನ್ ಮಟ್ಟು ಹೇಳಿದರು.

ಖಾಲಿ ತಲೆಗಳಿಗೆ ನಶೆ ತುಂಬಿಸುವುದು ಸುಲಭ. ಸಮಾಜಕ್ಕೆ ಬೇಕಾಗಿರುವುದು ಎಚ್ಚೆತ್ತ ಸಮಾಜವೇ ಹೊರತು ಅಗೋಚರವಾದ ಸಮಾಜವಲ್ಲ. ಚರ್ಚಿಸುವ, ನೇರಾನೇರವಾಗಿ ಮಾತನಾಡುವ ಸಮಾಜ ಇಂದಿನ ಅಗತ್ಯವಾಗಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಜತೆಗೂ ಸಂಬಂಧ ಇರಿಸಿಕೊಳ್ಳಲು ಸಾಧ್ಯವಾಗುವ ಸಮಾಜ ನಮ್ಮದಾಗಬೇಕಾಗಿದೆ. ಅಗೋಚರ ನಿದ್ರಾ ಸ್ಥಿತಿಯಲ್ಲಿರುವ ಸಮಾಜದಿಂದಾಗಿಯೇ ಕೋಮುವಾದ ವಿಜೃಂಭಿಸುತ್ತದೆ ಎಂದು ಅವರು ವ್ಯಾಖ್ಯಾನಿಸಿದರು.

ಕೋಮುವಾದವನ್ನು ಹರಡುವುದು ಸುಲಭದ ಕೆಲಸ. ಆದರೆ ಅದೇ ಜಾತ್ಯತೀತವಾದವನ್ನು ಹರಡಲು ಸಂವಿಧಾನದ ಪಾಠವನ್ನು ಕಲಿಸಬೇಕಾಗುತ್ತದೆ. ಇದು ಕಷ್ಟದ ಕೆಲಸ ಎಂದು ಹೇಳಿದ ದಿನೇಶ್ ಅಮೀನ್ ಮಟ್ಟು, ಕೋಮುವಾದದ ವಿಸ್ತೃತ ರೂಪವಾದ ಫ್ಯಾಸಿಸಂ, ಓದು ಅಥವಾ ಸಾಂಸ್ಕೃತಿಕ ಪ್ರಕಾರಗಳನ್ನು ಎದುರಿಸಲು ಹಿಂದೇಟು ಹಾಕುತ್ತದೆ. ಇದ್ದಕ್ಕಿದ್ದಂತೆಯೇ ಬುದ್ಧಿಜೀವಿಗಳು, ಹೋರಾಟಗಾರರು, ಸಾಹಿತಿಗಳ ಮೇಲೆ ದಾಳಿ ನಡೆಯುತ್ತಿರುವುದು ಹೊಸತೇನಲ್ಲ. ಫ್ಯಾಸಿಸ್ಟ್ ಶಕ್ತಿಗಳು ಮೆರೆದ ಇತಿಹಾಸವನ್ನು ಅವಲೋಕಿಸಿದಾಗ ಅಲ್ಲೆಲ್ಲಾ ಇಂತಹ ದಾಳಿ ನಡೆದಿರುವುದು ಸ್ಪಷ್ಟ. ಫ್ಯಾಸಿಸ್ಟ್ ಶಕ್ತಿಗಳು ಬೆಳೆದಂತೆ ಅವರ ಮೊದಲ ಗುರಿ ಸಾಹಿತಿಗಳು, ಬುದ್ಧಿಜೀವಿಗಳು ಹಾಗೂ ಲೇಖಕರಾಗಿರುತ್ತಾರೆ ಎಂದು ಹೇಳಿದರು.

ವಿವಾದದ ಮಾತುಗಳಿಗೆ ಕಾರಣವಾಗುವ ವ್ಯವಸ್ಥೆಯನ್ನು ಸರಿಪಡಿಸಿ

‘‘ದಿನೇಶ್ ಮಟ್ಟು ಬರುತ್ತಾರೆ. ಅವರು ವಿವಾದಾತ್ಮಕವಾಗಿ ಮಾತನಾಡುತ್ತಾರೆ ಎಂದು ಹೇಳುತ್ತಾರೆ. ಅದಕ್ಕಾಗಿ ಕಾರ್ಯಕ್ರಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ನನ್ನ ಮಾತುಗಳು ವಿವಾದಾತ್ಮಕವಾಗಿದ್ದರೆ, ಅದಕ್ಕೆ ಕಾರಣವಾಗುವ ವ್ಯವಸ್ಥೆಯನ್ನು ಮೊದಲು ಸರಿಪಡಿಸಿ’’ ಎಂದು ದಿನೇಶ್ ಅಮೀನ್ ಮಟ್ಟು ಅವರು ತಮ್ಮ ವಿರೋಧಿಗಳಿಗೆ ನಗೆ ಚಟಾಕಿಯ ಮೂಲಕ ಪ್ರತ್ಯುತ್ತರದೊಂದಿಗೆ ಮಾತು ಆರಂಭಿಸಿದರು.

ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಪ್ರೊ. ರಹಮತ್ ತರೀಕೆರೆ, ಡಾ. ರಾಮಮೂರ್ತಿ, ಶ್ರೀಪಾದ ಭಟ್, ಮುನೀರ್ ಕಾಟಿಪಳ್ಳ ಉಪಸ್ಥಿತರಿದ್ದರು.
ಸೀಮಾ ಸಮತಲ ಕೋಶ ಓದು ದೇಶ ನೋಡು ಬಳಗದ ಅಭಿಯಾನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News