ಯಾವುದೇ ವಿವಿ ಮಹಾತ್ಮಾ ಗಾಂಧಿ ಪೀಠವನ್ನು ಸ್ಥಾಪಿಸಿಲ್ಲ:ಸರಕಾರ

Update: 2018-08-11 15:06 GMT

ಹೊಸದಿಲ್ಲಿ,ಆ.11: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ)ವು ಒಪ್ಪಿಗೆ ನೀಡಿದ್ದರೂ ದೇಶದ ಯಾವುದೇ ವಿಶ್ವವಿದ್ಯಾಲಯವು ಮಹಾತ್ಮಾ ಗಾಂಧಿ ಪೀಠವನ್ನು ಸ್ಥಾಪಿಸಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವವಿದ್ಯಾನಿಲಯ ವ್ಯವಸ್ಥೆಯಲ್ಲಿ ಶೈಕ್ಷಣಿಕ ಸಂಪನ್ಮೂಲಗಳ ಸಂವರ್ಧನೆಯ ಉದ್ದೇಶದಿಂದ ನೊಬೆಲ್ ಪ್ರಶಸ್ತಿ ಪುರಸ್ಕೃತರು,ಖ್ಯಾತ ವ್ಯಕ್ತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅಸಾಧಾರಣ ಕೊಡುಗೆಗಳನ್ನು ನೀಡಿರುವ ಪ್ರತಿಷ್ಠಿತ ವ್ಯಕ್ತಿಗಳ ಹೆಸರುಗಳಲ್ಲಿ ವಿವಿಗಳಲ್ಲಿ ಪೀಠಗಳನ್ನು ಸ್ಥಾಪಿಸುವ ಯೋಜನೆಯನ್ನು ಯುಜಿಸಿ ರೂಪಿಸಿತ್ತು.

ಶಾಂತಿ ಮತ್ತು ಅಹಿಂಸೆ,ಸ್ವಾತಂತ್ರ ಚಳವಳಿ ಮತ್ತು ರಾಷ್ಟ್ರೀಯ ಅಖಂಡತೆಯ ವಿಷಯಗಳಲ್ಲಿ ಯುಜಿಸಿ ಒಪ್ಪಿಗೆ ನೀಡಿದ್ದ ಪೀಠಗಳಲ್ಲಿ ಮಹಾತ್ಮಾ ಗಾಂಧಿ ಪೀಠವೂ ಒಂದಾಗಿದೆ. ಆದರೆ ಯಾವುದೇ ವಿವಿಯಲ್ಲಿ ಮಹಾತ್ಮಾ ಗಾಂಧಿ ಪೀಠದ ಸ್ಥಾಪನೆಯಾಗಿಲ್ಲ ಮತ್ತು ಈ ವಿಷಯದಲ್ಲಿ ಯಾವುದೇ ವಿವಿ ಯುಜಿಸಿಗೆ ಪ್ರಸ್ತಾವ ಸಲ್ಲಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

 ಆದರೆ ವಿದ್ಯಾರ್ಥಿಗಳು ಗಾಂಧಿ ವಿಚಾರಧಾರೆಯ ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದು,ಇತ್ತೀಚಿನ ವರ್ಷಗಳಲ್ಲಿ ಈ ವಿಷಯದಲ್ಲಿ ಪದವಿ, ಸ್ನಾತಕೋತ್ತರ, ಎಂ.ಫಿಲ್ ಮತ್ತು ಪಿಎಚ್‌ಡಿಗಳಿಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News