ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವವರನ್ನು ‘ಪಾಕಿಸ್ತಾನಿಗಳೇ?’ ಎಂದು ಪ್ರಶ್ನಿಸಿದ ಪೋಸ್ಟ್ ಕಾರ್ಡ್ ಸ್ಥಾಪಕ

Update: 2018-08-11 16:37 GMT

“ದಯವಿಟ್ಟು ಈ ವಿಷಯ ಗಮನಿಸಿ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯಿಂದ ನಾಚಿಕೆಗೇಡಿನ ರಾಜಕೀಯ. ‘ಜಶ್ನೆ-ಇ-ಆಝಾದಿ’ ಇದರ ಅರ್ಥವೇನು ಹಾಗು ದಿನಾಂಕ 14ನೆ ಆಗಸ್ಟ್ ಎಂದಿದೆ. ಇವರು ಪಾಕಿಸ್ತಾನಿಗಳೇ. ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ” ಎಂದು ಸುಳ್ಳು ಸುದ್ದಿಗಳನ್ನು ಹರಡುವುದರಲ್ಲಿ ಕುಖ್ಯಾತಿ ಗಳಿಸಿರುವ ‘ಪೋಸ್ಟ್ ಕಾರ್ಡ್ ನ್ಯೂಸ್’ನ ಮಹೇಶ್ ವಿಕ್ರಮ್ ಹೆಗ್ಡೆ ಟ್ವೀಟ್ ಒಂದನ್ನು ಮಾಡಿದ್ದರು. ಈ ಹಿಂದೆಯೂ ಹಲವು ಬಾರಿ ಸುಳ್ಳು ಹರಡಿ ಸಿಕ್ಕಿಬಿದ್ದ ಕುಖ್ಯಾತಿ ‘ಪೋಸ್ಟ್ ಕಾರ್ಡ್ ನ್ಯೂಸ್’ಗಿದ್ದು, ಈ ಬಾರಿ ಮಹೇಶ್ ವಿಕ್ರಮ್ ಹೆಗ್ಡೆಯ ಟ್ವೀಟ್ ಇದಕ್ಕೆ ಹೊರತಾಗಿಲ್ಲ. ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಸರಕಾರವನ್ನು ಟೀಕಿಸುವ ಭರದಲ್ಲಿ ವಿಕ್ರಮ್ ಹೆಗ್ಡೆ ಪ.ಬಂಗಾಳ ಟಿಟಾಗರ್ ನಲ್ಲಿ ಹಮ್ಮಿಕೊಳ್ಳಲಾಗಿರುವ ಸ್ವಾತಂತ್ರ್ಯ ದಿನಾಚರಣೆಯನ್ನು ಅವಮಾನಿಸಿದ್ದಾರೆ.

ಈ ಮೇಲಿನ ಟ್ವೀಟ್ ಮಾಡಿದ್ದ ಮಹೇಶ್ ವಿಕ್ರಮ್ ಹೆಗ್ಡೆ ಚಿತ್ರವೊಂದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಜಶ್ನೆ –ಇ-ಆಝಾದಿ ಎನ್ನುವ ಪೋಸ್ಟರ್ ಒಂದರ ಫೋಟೊ ಇದಾಗಿದೆ. ಅದರಲ್ಲಿ 2018 14ನೆ ಆಗಸ್ಟ್ ಎಂದು ದಿನಾಂಕವಿದೆ. ರಾತ್ರಿ 8 ಗಂಟೆ ಎಂದು ಬರೆಯಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಪ್ರತಿವರ್ಷ ಆಗಸ್ಟ್ 14ರಂದು ‘ಮುಶೈರಾ’ಗಳು ಹಾಗು ‘ಕವಿ ಸಮ್ಮೇಳನ’ಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎನ್ನುವ ಅರಿವು ಬಹುಷಃ ವಿಕ್ರಮ್ ಹೆಗ್ಡೆಗೆ ಇಲ್ಲವಾಗಿರಬಹುದು. 2017ರ ಆಗಸ್ಟ್ 14ರಂದು ನಡೆದ ಕವಿ ಸಮ್ಮೇಳನದ ಫೋಟೊ ಈ ಕೆಳಗಿದೆ.

“ಅವರು ಪಾಕಿಸ್ತಾನಿಗಳೇ” ಎಂದು ಪ್ರಶ್ನಿಸುವ ವಿಕ್ರಮ್ ಹೆಗ್ಡೆಗೆ ಬ್ಯಾನರ್ ನಲ್ಲಿ ತ್ರಿವರ್ಣ ಧ್ವಜವನ್ನು ಗುರುತಿಸಲು ಸಾಧ್ಯವಾಗಿಲ್ಲ. ಇಷ್ಟೇ ಅಲ್ಲದೆ ‘ಜಶ್ನೇ-ಇ-ಆಝಾದಿ’ ಎನ್ನುವುದಕ್ಕೆ ‘ಸ್ವಾತಂತ್ರ್ಯದ ಆಚರಣೆ’ ಎನ್ನುವ ಅರ್ಥವಿದೆ ಎನ್ನುವುದು ಬಹುಷ ಹೆಗ್ಡೆಗೆ ತಿಳಿದಿಲ್ಲ. ಮಮತಾ ಬ್ಯಾನರ್ಜಿಯವರ ಟಿಎಂಸಿ ಹಾಗು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷಕಾರಲು ಸ್ವಾತಂತ್ರ್ಯೋತ್ಸವವನ್ನು ಬಳಸಿಕೊಂಡ ಇವರಿಗೆ ಭಾರತದ ರಾಷ್ಟ್ರಪತಿಗಳು ಪ್ರತಿವರ್ಷ ಆಗಸ್ಟ್ 14ರಂದು ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ ಎನ್ನುವುದು ತಿಳಿದಿಲ್ಲವಾಗಿದೆ.

ಕೆಲವು ಕಿಡಿಗೇಡಿಗಳು ಇದೇ ಫೋಟೊವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಗಳನ್ನು ಹರಡುತ್ತಿದ್ದಾರೆ. ಅವರು ಒಂದೋ ಭಾರತದ ಸ್ವಾತಂತ್ರ್ಯೋತ್ಸವದ ಬಗ್ಗೆ ತಿಳಿದಿಲ್ಲದವರಾಗಿರಬಹುದು ಅಥವಾ ದ್ವೇಷದ ಅಜೆಂಡಾ ಹೊಂದಿರುವವರಾಗಿರಬಹುದು.

ಹೆಗ್ಡೆ ಮತ್ತು ಇತರ ಕಿಡಿಗೇಡಿಗಳು ಅಪಪ್ರಚಾರ ನಡೆಸಿದ ಜಶ್ನೆ-ಇ-ಆಝಾದಿ ಆಲ್ ಇಂಡಿಯಾ ಮುಶೈರಾ ವರ್ಷಂಪ್ರತಿ ನಡೆಯುತ್ತದೆ. 2017ರಲ್ಲೂ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಇದನ್ನು ಆಯೋಜಿಸಲಾಗಿತ್ತು.

ಮಹೇಶ್ ವಿಕ್ರಂ ಹೆಗ್ಡೆಯ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಒಬ್ಬರು, “ತ್ರಿವರ್ಣ ಧ್ವಜವನ್ನು ಗೌರವಿಸದ ಇವರಿಗೆ ‘ಸ್ವಾತಂತ್ರ್ಯದ ಮುನ್ನಾದಿನ’ ಎಂದರೆ ಹೇಗೆ ತಿಳಿಯುತ್ತದೆ. ಸ್ವಾತಂತ್ರ್ಯದ ಮುನ್ನಾದಿನ ಅಂದರೆ ಆಗಸ್ಟ್ 14ರಂದು ಇಷ್ಟು ವರ್ಷಗಳಿಂದ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು, ಇವರು ಮಲಗಿದ್ದರೇ?” ಎಂದವರು ಪ್ರಶ್ನಿಸಿದ್ದಾರೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News