5 ರೈಲುಗಳಲ್ಲಿ ಎಸಿ ಕೋಚ್‌ಗಳ ಟಿಕೆಟ್ ದರಗಳಲ್ಲಿ ಕಡಿತ

Update: 2018-08-12 12:30 GMT

ಹೊಸದಿಲ್ಲಿ,ಆ.12: ಭಾರತೀಯ ರೈಲ್ವೆಯು ವಾತಾನುಕೂಲಿತ(ಎಸಿ) ರೈಲುಗಳಲ್ಲಿ ಪ್ರಯಾಣಿಸುವಂತೆ ಜನರನ್ನು ಉತ್ತೇಜಿಸಲು ತನ್ನ ಐದು ರೈಲುಗಳಲ್ಲಿಯ ಎಸಿ ಕೋಚ್‌ಗಳ ಪ್ರಯಾಣ ದರಗಳನ್ನು ಕಡಿತಗೊಳಿಸಿದೆ.

ನೈಋತ್ಯ ರೈಲ್ವೆಯು ಕರ್ನಾಟಕದ ಬೆಂಗಳೂರು,ಗದಗ ಮತ್ತು ಮೈಸೂರಿನಿಂದ ಹೊರಡುವ ಐದು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಎಸಿ ಕೋಚ್‌ಗಳ ಪ್ರಯಾಣ ದರಗಳನ್ನು ಕಡಿತಗೊಳಿಸಿದೆ ಎಂದು ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಬೆಂಗಳೂರು ಮೂಲಕ ಮೈಸೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್‌ನ ಎಸಿ ಚೇರ್ ಕಾರ್‌ನ ಪ್ರಯಾಣ ಶುಲ್ಕವನ್ನು ಕಡಿಮೆ ಮಾಡಿರುವುದರಿಂದ ಬಸ್ ಅಥವಾ ವಿಮಾನಕ್ಕಿಂತ ಹೆಚ್ಚು ಜನರು ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರಿಂದ ಉತ್ತೇಜಿತಗೊಂಡ ಇಲಾಖೆಯು ಯಶವಂತಪುರ-ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್‌ನಲ್ಲಿ ಎಸಿ ಪ್ರಯಾಣದರವನ್ನು 735 ರೂ.ಗಳಿಂದ 590 ರೂ.ಗಳಿಗೆ ತಗ್ಗಿಸಿದೆ. ಆ.4ರಂದು ಮೊದಲ ಬಾರಿಗೆ ಈ ಸಾಪ್ತಾಹಿಕ ರೈಲಿನಲ್ಲಿ ಕಡಿಮೆ ಪ್ರಯಾಣ ದರಗಳನ್ನು ಜಾರಿಗೊಳಿಸಲಾಗಿದೆ ಎಂದರು.

ಡಿ.3ರಿಂದ ಮೈಸೂರು-ಶಿರಡಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೈಸೂರು-ಬೆಂಗಳೂರು ನಡುವೆ 3-ಟೈರ್ ಎಸಿ ಕೋಚ್ ದರ ಈಗಿನ 495 ರೂ.ಗಳಿಂದ 260 ರೂ.ಗೆ ಇಳಿಯಲಿದೆ. ನ.30ರಿಂದ ಯಶವಂತಪುರ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರು-ಹುಬ್ಬಳ್ಳಿ ನಡುವೆ ಎಸಿ 3-ಟೈರ್ ಪ್ರಯಾಣ ದರ 735 ರೂ.ಗಳಿಂದ 590 ರೂ.ಗಳಿಗೆ ಇಳಿಯಲಿದೆ. ನ.22ರಿಂದ ಯಶವಂತಪುರ-ಸಿಕಂದರಾಬಾದ್ ಎಕ್ಸ್‌ಪ್ರೆಸ್‌ನಲ್ಲಿ 3-ಟೈರ್ ಎಸಿ ಕೋಚ್‌ನಲ್ಲಿ ಪ್ರಯಾಣ ದರ ಈಗಿನ 345 ರೂ.ಗಳಿಂದ 305 ರೂ.ಗಳಿಗೆ ತಗ್ಗಲಿದೆ. ತನ್ಮಧ್ಯೆ ಪ್ರಯಾಣಿಕರಿಗೆ ಹೆಚ್ಚಿನ ಹಿತಾನುಭವ ನೀಡಲು ಎಸಿ ಕೋಚ್‌ನಲ್ಲಿ ಒದಗಿಸುವ ಬ್ಲಾಂಕೆಟ್‌ಗಳು ಸ್ವಚ್ಛವಾಗಿರಬೇಕೆಂದು ರೈಲ್ವೆ ಮಂಡಳಿಯು ನಿರ್ದೇಶಗಳನ್ನು ಹೊರಡಿಸಿದೆ. ತಲಾ 450 ಗ್ರಾಂ ತೂಗುವ ನೂತನ ಬ್ಲಾಂಕೆಟ್‌ಗಳು ಶೇ.60ರಷ್ಟು ಉಣ್ಣೆ ಮತ್ತು ಶೆ.15ರಷ್ಟು ನೈಲಾನ್ ಹೊಂದಿರಲಿವೆ. ಹಾಲಿ ಸಣ್ಣ ಗಾತ್ರದ,2.2 ಕೆ.ಜಿ.ತೂಗುವ ಬ್ಲಾಂಕೆಟ್‌ಗಳನ್ನು ನೀಡಲಾಗುತ್ತಿದ್ದು,ಕಳೆದ ನಾಲ್ಕು ವರ್ಷಗಳಿಂದ ಇವು ಬಳಕೆಯಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News