ತಂದೆಯಂತೆ ನಾನೂ ಭದ್ರತಾ ಪಡೆ ಸೇರುತ್ತೇನೆ: ಹತ ಪೊಲೀಸ್ ಸಿಬ್ಬಂದಿಯ ಪುತ್ರ ಸಾಹಿಲ್

Update: 2018-08-13 13:36 GMT
ಚಿತ್ರ ಕೃಪೆ ANI

ರಾಜೌರಿ(ಜ-ಕಾ),ಆ.13: ರವಿವಾರ ಶ್ರೀನಗರದ ಬಟಮಾಲೂ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಕಾಳಗದಲ್ಲಿ ವಿಶೇಷ ಕಾರ್ಯಾಚರಣೆ ತಂಡ(ಎಸ್‌ಒಜಿ)ದ ಸಿಬ್ಬಂದಿ ಪರ್ವೇಜ್ ಅಹ್ಮದ್ ಹತರಾಗಿದ್ದಾರೆ ನಿಜ, ಆದರೆ ಇದು ಅವರ ಇಬ್ಬರು ಅಪ್ರಾಪ್ತ ವಯಸ್ಕ ಮಕ್ಕಳ ದೃಢನಿರ್ಣಯಕ್ಕೆ ಚ್ಯುತಿಯನ್ನುಂಟು ಮಾಡಿಲ್ಲ. ಬದಲಿಗೆ ಅವರನ್ನು ಇನ್ನಷ್ಟು ಗಟ್ಟಿಯಾಗಿಸಿದೆ. ತಾವು ದೊಡ್ಡವರಾದ ಬಳಿಕ ಭದ್ರತಾ ಪಡೆಗಳಲ್ಲಿ ಅಧಿಕಾರಿಗಳಾಗಿ ಭಯೋತ್ಪಾದಕರನ್ನು ಕೊಲ್ಲಲು ಈ ಬಾಲಕರು ಬಯಸಿದ್ದಾರೆ.

 ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ಸಂಚಾರಕ್ಕೆ ಅಡ್ಡಿಯುಂಟಾಗಿರುವುದರಿಂದ ಅಹ್ಮದ್‌ರ ಪಾರ್ಥಿವ ಶರೀರವಿನ್ನೂ ಅವರ ಮನೆಯನ್ನು ತಲುಪಿಲ್ಲ,ಆದರೆ ಅವರ 12ರ ಹರೆಯದ ಪುತ್ರ ಸಾಹಿಲ್‌ಗೆ ತನ್ನ ಬದುಕಿನ ಭವಿಷ್ಯದ ಮಾರ್ಗ ಯಾವುದು ಎನ್ನುವುದು ಚೆನ್ನಾಗಿ ತಿಳಿದಿದೆ.

‘ನಾನು ನನ್ನ ತಂದೆಯಂತೆ ಅಧಿಕಾರಿಯಾಗಲು ಬಯಸಿದ್ದೇನೆ. ನನ್ನ ತಂದೆಯ ಸಾವಿಗೆ ಪ್ರತೀಕಾರ ತೆಗೆದುಕೊಳ್ಳಲು ಬಯಸಿದ್ದೇನೆ. ಅವರ ಬಲಿದಾನವು ವ್ಯರ್ಥವಾಗುವದಿಲ್ಲ’ ಎಂದು ರವಿವಾರ ತನ್ನನ್ನು ಭೇಟಿಯಾದ ಸುದ್ದಿಗಾರರಿಗೆ ಆತ ತಿಳಿಸಿದ. ಆತನೊಂದಿಗೆ ಎಂಟರ ಹರೆಯದ ತಮ್ಮನೂ ಧ್ವನಿಗೂಡಿಸಿದ್ದ.

ಜಮ್ಮು-ಕಾಶ್ಮೀರ ಪೊಲೀಸ್‌ನ ಭಯೋತ್ಪಾದನೆ ನಿಗ್ರಹ ದಳದ ಸದಸ್ಯರಾಗಿದ್ದ ಅಹ್ಮದ್ ಕುಟುಂಬದ ಏಕಮೇವ ಆಧಾರ ಸ್ತಂಭವಾಗಿದ್ದು,ತನ್ನ ಗಳಿಕೆಯಿಂದ ಕುಟುಂಬದಲ್ಲಿಯ 11 ಜನರ ತುತ್ತಿನ ಚೀಲಗಳನ್ನು ತುಂಬಿಸುತ್ತಿದ್ದರು. ಆದರೆ ಅವರ ಸಾವಿನಿಂದ ಈಗ ಕುಟುಂಬಕ್ಕೆ ಭವಿಷ್ಯದ ಬಗ್ಗೆ ದಿಕ್ಕು ತೋಚದಂತಾಗಿದೆ. ಅಹ್ಮದ್‌ರ ತಂದೆ ನೆರವಿಗಾಗಿ ರಾಜ್ಯ ಸರಕಾರವನ್ನು ಕೋರಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News