30 ಭಾರತೀಯ ಕೈದಿಗಳನ್ನು ಬಿಡುಗಡೆಗೊಳಿಸಿದ ಪಾಕಿಸ್ತಾನ

Update: 2018-08-13 13:52 GMT

ಇಸ್ಲಾಮಾಬಾದ್,ಆ.13: ದೇಶದ ಸ್ವಾತಂತ್ರೋತ್ಸವ ದಿನದ ಮುನ್ನಾದಿನವಾದ ಸೋಮವಾರ ಸೌಹಾರ್ದ ಸಂಕೇತವಾಗಿ 27 ಮೀನುಗಾರರು ಸೇರಿದಂತೆ 30 ಭಾರತೀಯ ಕೈದಿಗಳನ್ನು ಪಾಕಿಸ್ತಾನವು ಬಿಡುಗಡೆಗೊಳಿಸಿದೆ.

ಮಾನವೀಯ ವಿಷಯಗಳನ್ನು ರಾಜಕೀಕರಿಸಬಾರದು ಎಂಬ ಪಾಕಿಸ್ತಾನದ ಸುಸ್ಥಿರ ನೀತಿಗೆ ಅನುಗುಣವಾಗಿ ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ವಿದೇಶಾಂಗ ಕಚೇರಿಯ ವಕ್ತಾರ ಮುಹಮ್ಮದ ಫೈಸಲ್ ಅವರು ಹೇಳಿಕೆಯೊಂದರಲ್ಲಿ ತಿಳಿಸಿದರು.

ಆ.14ರ ಸ್ವಾತಂತ್ರ ದಿನದ ಅಂಗವಾಗಿ ಸೌಹಾರ್ದ ಸಂಕೇತವಾಗಿ ಈ ಬಿಡುಗಡೆ ಮಾಡಲಾಗಿದೆ. ಭಾರತವೂ ಇದೇ ರೀತಿಯಲ್ಲಿ ಸ್ಪಂದಿಸುತ್ತದೆ ಎಂದು ಆಶಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

418 ಮೀನುಗಾರರು ಸೇರಿದಂತೆ 470ಕ್ಕೂ ಅಧಿಕ ಭಾರತೀಯರು ಪಾಕಿಸ್ತಾನದ ಜೈಲುಗಳಲ್ಲಿದ್ದಾರೆ ಎಂದು ಸರಕಾರವು ಕಳೆದ ಜುಲೈನಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿತ್ತು.

ಪಾಕಿಸ್ತಾನದ ಜಲಪ್ರದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ರವಿವಾರ ವರದಿಯಾಗಿತ್ತು.

ಅವರನ್ನು ಕರಾಚಿಯ ಮಾಲಿರ್ ಜೈಲಿನಿಂದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದ್ದು,ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News