ಭಾರತದ ಅತಿ ಪ್ರಭಾವವನ್ನು ಕಳಚಿಕೊಳ್ಳಲು ಮಾಲ್ದೀವ್ಸ್ ಬಯಸಿದೆ: ಚೀನಾ ಪತ್ರಿಕೆ

Update: 2018-08-13 14:05 GMT

ಬೀಜಿಂಗ್, ಆ. 13: ತನ್ನ ಸೇನಾ ಹೆಲಿಕಾಪ್ಟರ್‌ಗಳು ಮತ್ತು ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಮಾಲ್ದೀವ್ಸ್ ಭಾರತಕ್ಕೆ ಸೂಚಿಸಿರುವುದು, ತನ್ನ ಮೇಲಿನ ಹೆಚ್ಚುವರಿ ಭಾರತೀಯ ಪ್ರಭಾವವನ್ನು ಕಳಚಿಕೊಳ್ಳುವ ಮಾಲ್ದೀವ್ಸ್‌ನ ಇಚ್ಛೆಯನ್ನು ಸೂಚಿಸುತ್ತದೆ ಎಂದು ಚೀನಾದ ಸರಕಾರಿ ಮಾಧ್ಯಮ ‘ಗ್ಲೋಬಲ್ ಟೈಮ್ಸ್’ ಹೇಳಿದೆ.

ಚೀನಾದ ಆಣತಿಯಂತೆ ಮಾಲ್ದೀವ್ಸ್ ಈ ಕ್ರಮವನ್ನು ತೆಗೆದುಕೊಂಡಿದೆ ಎಂಬುದಾಗಿ ಭಾರತೀಯ ರಾಜತಾಂತ್ರಿಕರು ಮತ್ತು ಭದ್ರತಾ ಅಧಿಕಾರಿಗಳು ಭಾವಿಸುವುದು ತಪ್ಪು ಎಂದು ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನವೊಂದು ತಿಳಿಸಿದೆ. ಚೀನಾ ಯಾವುದೇ ದೇಶದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅದು ಹೇಳಿಕೊಂಡಿದೆ.

ಮಾಲ್ದೀವ್ಸ್‌ನ ಈ ಉಪಕ್ರಮವು ಚೀನಾವನ್ನು ‘ನಿಯಂತ್ರಣ’ದಲ್ಲಿಟ್ಟುಕೊಳ್ಳಲು ಹೊರಟಿರುವ ಭಾರತ, ಆಸ್ಟ್ರೇಲಿಯ, ಅಮೆರಿಕ ಮತ್ತು ಜಪಾನ್‌ಗಳನ್ನೊಳಗೊಂಡ ನಾಲ್ಕು ದೇಶಗಳ ಇಂಡೋ-ಪೆಸಿಫಿಕ್ ಗುಂಪಿಗೂ ಎಚ್ಚರಿಕೆಯಾಗಿದೆ ಎಂದು ಪತ್ರಿಕೆ ಬರೆದಿದೆ.

ಸೇನಾ ಹೆಲಿಕಾಪ್ಟರ್‌ಗಳನ್ನು ಮಾಲ್ದೀವ್ಸ್‌ನಲ್ಲಿ ಇರಿಸುವುದಕ್ಕೆ ಸಂಬಂಧಿಸಿದ ಒಪ್ಪಂದವು ಜೂನ್‌ನಲ್ಲಿ ಮುಕ್ತಾಯಗೊಂಡಿರುವುದರಿಂದ, ಅವುಗಳನ್ನು ಮತ್ತು ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವಂತೆ ಭಾರತಕ್ಕೆ ಮಾಲ್ದೀವ್ಸ್ ಸೂಚಿಸಿದೆ ಎಂದು ಕಳೆದ ವಾರ ಮಾಲ್ದೀವ್ಸ್ ರಾಯಭಾರಿ ಮಾಧ್ಯಮವೊಂದಕ್ಕೆ ಹೇಳಿದ್ದರು.

ಹಿಂದೂ ಮಹಾಸಾಗರದಲ್ಲಿರುವ ಜಗತ್ತಿನ ಅತ್ಯಂತ ನಿಬಿಡ ಜಲಮಾರ್ಗಕ್ಕೆ ಸಮೀಪದಲ್ಲಿರುವ ದ್ವೀಪಗಳ ಸಮೂಹ ಮಾಲ್ದೀವ್ಸ್ ಮೇಲೆ ಭಾರತ ಗಣನೀಯ ಪ್ರಮಾಣದಲ್ಲಿ ಪ್ರಭಾವ ಹೊಂದಿದೆ.

 ಆದಾಗ್ಯೂ, ಅಬ್ದುಲ್ಲಾ ಯಮೀನ್ ಸರಕಾರದಡಿಯಲ್ಲಿ ಈ ದೇಶಗಳ ನಡುವಿನ ಬಾಂಧವ್ಯ ಕ್ಷೀಣಿಸಿದೆ. ಅಬ್ದುಲ್ಲಾ ಯಮೀನ್ ಚೀನಾ ಪರ ನಿಲುವುಳ್ಳ ವ್ಯಕ್ತಿ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News