ವಾಸಯೋಗ್ಯ ನಗರದ ಪಟ್ಟಿ: ಪುಣೆಗೆ ಅಗ್ರಸ್ಥಾನ, ದಿಲ್ಲಿಗೆ 65ನೇ ಸ್ಥಾನ

Update: 2018-08-13 17:45 GMT

ಹೊಸದಿಲ್ಲಿ, ಆ.13: ಕೇಂದ್ರ ಸರಕಾರ ರೂಪಿಸಿರುವ ವಾಸಸೋಗ್ಯ ನಗರಗಳ ಸೂಚ್ಯಂಕ ಪಟ್ಟಿಯಲ್ಲಿ ಪುಣೆ, ನವಿ ಮುಂಬೈ ಹಾಗೂ ಗ್ರೇಟರ್ ಮುಂಬೈ ನಗರಗಳು ಪ್ರಥಮ ಮೂರು ಸ್ಥಾನ ಪಡೆದಿದ್ದರೆ, ದಿಲ್ಲಿ 65ನೇ ಸ್ಥಾನದಲ್ಲಿದೆ.

111 ನಗರಗಳ ಈ ಪಟ್ಟಿಯಲ್ಲಿ ಉತ್ತರಪ್ರದೇಶದ ರಾಂಪುರ ಕಡೆಯ ಸ್ಥಾನದಲ್ಲಿದೆ. ಕೋಲ್ಕತಾ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ. ಚೆನ್ನೈ 14ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದ ಮೂರು ನಗರಗಳು ಅಗ್ರ ಮೂರು ಸ್ಥಾನ ಗಳಿಸಿರುವುದು ವಿಶೇಷವಾಗಿದೆ. ವಸತಿ ಮತ್ತು ಗ್ರಾಮೀಣ ವ್ಯವಹಾರಗಳ ಇಲಾಖೆ ಪ್ರಕಟಿಸಿರುವ ಸೂಚ್ಯಂಕ ಪಟ್ಟಿಯಲ್ಲಿ ತಿರುಪತಿ, ಚಂಡೀಗಡ, ಥಾಣೆ, ರಾಯ್‌ಪುರ, ಇಂದೋರ್, ವಿಜಯವಾಡ ಮತ್ತು ಭೋಪಾಲ್ ನಗರಗಳು ಕ್ರಮವಾಗಿ 4ರಿಂದ 10ರವರೆಗಿನ ಸ್ಥಾನ ಗಳಿಸಿವೆ.

ಬಳಿಕದ ಸ್ಥಾನಗಳಲ್ಲಿ ಕ್ರಮವಾಗಿ ತೆಲಂಗಾಣದ ಕರೀಂನಗರ, ತಿರುಚಿರಾಪಳ್ಳಿ, ಬಿಲಾಸ್‌ಪುರ, ಜಬಲ್‌ಪುರ, ಅಮರಾವತಿ, ವಿಶಾಖಪಟ್ಟಣಂ, ಭುವನೇಶ್ವರ, ಸೂರತ್, ವಸೈ-ವಿರಾರ್ ನಗರ, ನಾಶಿಕ್, ಸೋಲಾಪುರ ನಗರಗಳಿವೆ. ಅಹ್ಮದಾಬಾದ್ 23ನೇ, ಹೈದರಾಬಾದ್ 27ನೇ ಮತ್ತು ವಾರಾಣಸಿ 33ನೇ ಸ್ಥಾನದಲ್ಲಿದೆ. ಅಗ್ರ 10ರಲ್ಲಿ ಉತ್ತರಪ್ರದೇಶ ಅಥವಾ ತಮಿಳುನಾಡಿನ ಯಾವುದೇ ನಗರಗಳು ಕಾಣಿಸಿಕೊಂಡಿಲ್ಲ. ಶ್ರೀನಗರ 100ನೇ, ಜಮ್ಮು 95ನೇ, ಪಣಜಿ 90ನೇ, ಆಲಿಗಢ 86ನೇ, ಗುರುಗ್ರಾಮ್ 88ನೇ , ಮೀರತ್ 101ನೇ, ಘಾಜಿಯಾಬಾದ್ 46ನೇ, ರಾಯ್‌ಬರೇಲಿ 49ನೇ ಸ್ಥಾನ ಗಳಿಸಿದೆ. ಆಡಳಿತ, ಸಾಮಾಜಿಕ, ಆರ್ಥಿಕ ಹಾಗೂ ಭೌತಿಕ ಮೂಲಸೌಕರ್ಯಗಳನ್ನು ಮಾನದಂಡವನ್ನಾಗಿ ಇರಿಸಿಕೊಂಡು ಇದೇ ಮೊದಲ ಬಾರಿಗೆ ಸಚಿವಾಲಯ ಈ ಸೂಚ್ಯಂಕ ಪಟ್ಟಿ ತಯಾರಿಸಿದೆ. ಒಟ್ಟು 100 ಅಂಕಗಳನ್ನು ಮೂಲವಾಗಿರಿಸಿಕೊಂಡು ಸೂಚ್ಯಂಕ ಪಟ್ಟಿ ತಯಾರಿಸಲಾಗಿದೆ ಎಂದು ವಸತಿ ಮತ್ತು ಗ್ರಾಮೀಣ ವ್ಯವಹಾರಗಳ ಇಲಾಖೆಯ ಸಚಿವ ಹರ್ದೀಪ್‌ಸಿಂಗ್ ಪುರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News