ಬಾರ್ಸಿಲೋನಾಕ್ಕೆ 13ನೇ ಸ್ಪ್ಯಾನಿಶ್ ಸೂಪರ್ ಕಪ್

Update: 2018-08-13 18:04 GMT

ಮೊರೊಕ್ಕೊ, ಆ.13: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಲಿಯೊನೆಲ್ ಮೆಸ್ಸಿ ನೇತೃತ್ವದ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ರವಿವಾರ ನಡೆದ ಸ್ಪ್ಯಾನಿಶ್ ಸೂಪರ್ ಕಪ್ ಫೈನಲ್‌ನಲ್ಲಿ ಸೆವಿಲ್ಲಾ ತಂಡವನ್ನು 2-1 ಅಂತರದಿಂದ ಮಣಿಸಿತು. ಈ ಮೂಲಕ 13ನೇ ಬಾರಿ ಸೂಪರ್‌ಕಪ್‌ನ್ನು ಜಯಿಸಿ ದಾಖಲೆ ನಿರ್ಮಿಸಿತು.

78ನೇ ನಿಮಿಷದಲ್ಲಿ ಫ್ರಾನ್ಸ್ ವಿಂಗರ್ ಒಸ್ಮಾನ್ ಡೆಂಬೆಲ್ ಬಾರಿಸಿದ ಆಕರ್ಷಕ ಗೋಲು ಹಾಗೂ 89ನೇ ನಿಮಿಷದಲ್ಲಿ ಸೆವಿಲ್ಲಾ ತಂಡಕ್ಕೆ ಪೆನಾಲ್ಟಿ ಕಿಕ್ ಗೋಲು ನಿರಾಕರಿಸಿದ ಗೋಲ್‌ಕೀಪರ್ ಮಾರ್ಕ್-ಆ್ಯಂಡ್ರೆ ಟೆರ್ ಸ್ಟೆಗೆನ್ ಬಾರ್ಸಿಲೋನ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.

ಕಿಂಗ್ಸ್ ಕಪ್ ರನ್ನರ್ಸ್-ಅಪ್ ಸೆವಿಲ್ಲಾ ತಂಡ ಪಾಬ್ಲೊ ಸರಾಬಿಯಾ 9ನೇ ನಿಮಿಷದಲ್ಲಿ ಬಾರಿಸಿದ ಗೋಲು ನೆರವಿನಿಂದ 1-0 ಮುನ್ನಡೆ ಸಾಧಿಸಿತು. ಸ್ಪ್ಯಾನಿಶ್ ಫುಟ್ಬಾಲ್‌ನಲ್ಲಿ ಮೊದಲ ಬಾರಿ ಅಳವಡಿಸಲಾಗಿರುವ ವಿಡಿಯೋ ಅಸಿಸ್ಟೆಂಟ್ ರೆಫರಿ(ವಿಎಆರ್)ಮೂಲಕ ಸೆವಿಲ್ಲಾಗೆ ಮೊದಲ ಗೋಲು ಲಭಿಸಿತು. 42ನೇ ನಿಮಿಷದಲ್ಲಿ ಗೋಲು ಬಾರಿಸಿದ ಬಾರ್ಸಿಲೋನಾದ ಗೆರಾರ್ಡ್ ಪಿಕ್ಯೂ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು. ಇದೇ ಮೊದಲ ಬಾರಿ ಸ್ಪೇನ್‌ನಿಂದ ಹೊರಗೆ ನಡೆದ ಸ್ಪ್ಯಾನಿಶ್ ಕಪ್ ಪಂದ್ಯವು ಹೆಚ್ಚುವರಿ ಸಮಯಕ್ಕೆ ವಿಸ್ತರಣೆಯಾಗುವ ಲಕ್ಷಣ ಗೋಚರಿಸಿತ್ತು. ಆಗ 78ನೇ ನಿಮಿಷದಲ್ಲಿ ಗೋಲು ಬಾರಿಸಿದ ಡೆಂಬೆಲ್ ಬಾರ್ಸಿಲೋನಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. 89ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್ ಅವಕಾಶ ಪಡೆದಿದ್ದ ಸೆವಿಲ್ಲಾ ತಂಡಕ್ಕೆ ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ಒಯ್ಯುವ ಸುವರ್ಣಾವಕಾಶ ಲಭಿಸಿತ್ತು. ಆದರೆ, ಬದಲಿ ಆಟಗಾರ ವಿಸ್ಸಾಂ ಬೆನ್ ಯೆಡ್ಡರ್ ಹೊಡೆದ ಚೆಂಡನ್ನು ಬಾರ್ಸಿಲೋನಾದ ಗೋಲ್‌ಕೀಪರ್ ಸ್ಟೆಗನ್ ತಡೆಯಲು ಯಶಸ್ವಿಯಾದರು.

ಮಾಜಿ ಮಿಡ್ ಫೀಲ್ಡರ್ ಆ್ಯಂಡ್ರೆಸ್ ಇನಿಯೆಸ್ಟಾ ರಿಂದ ನಾಯಕತ್ವವನ್ನು ವಹಿಸಿಕೊಂಡ ಬಳಿಕ ಮೆಸ್ಸಿ ಮೊದಲ ಬಾರಿ ಪ್ರಶಸ್ತಿ ಜಯಿಸಿದ್ದಾರೆ. ಬಾರ್ಸಿ ಲೋನಾದ ಪರ 33ನೇ ಟ್ರೋಫಿ ಜಯಿಸಿದ ಮೆಸ್ಸಿ ಬಾರ್ಸಿಲೋನಾದ ಓರ್ವ ಯಶಸ್ವಿ ಆಟಗಾರನಾಗಿ ಹೊರಹೊಮ್ಮಿದರು. 32 ಟ್ರೋಫಿಗಳನ್ನು ಜಯಿಸಿದ್ದ ಇನಿಯೆಸ್ಟಾ ದಾಖಲೆಯನ್ನು ಮುರಿದ ಮೆಸ್ಸಿ ಹೊಸ ದಾಖಲೆ ನಿರ್ಮಿಸಿದರು. ಇನಿಯೆಸ್ಟಾ ಇತ್ತೀಚೆಗೆ ಬಾರ್ಸಿಲೋನಾವನ್ನು ತ್ಯಜಿಸಿ ಜಪಾನ್ ಫುಟ್ಬಾಲ್ ಲೀಗ್‌ನ್ನು ಸೇರಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News