ಮಂಗಳೂರು ರಾಜ್ಯದಲ್ಲಿಯೇ ಅತ್ಯಂತ ಸುರಕ್ಷಿತ, ವಾಸಯೋಗ್ಯ ನಗರ

Update: 2018-08-14 10:26 GMT

ಮಂಗಳೂರು,ಆ.14 :  ಕರಾವಳಿ ನಗರ ಮಂಗಳೂರು ರಾಜ್ಯದಲ್ಲಿಯೇ ಅತ್ಯಂತ ಸುರಕ್ಷಿತ ಹಾಗೂ ವಾಸಯೋಗ್ಯ ನಗರ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸೋಮವಾರ ಬಿಡುಗಡೆಗೊಳಿಸಿದ ಈಸ್ ಆಫ್ ಲಿವಿಂಗ್ ಇಂಡೆಕ್ಸ್ 2018 ವರದಿಯಲ್ಲಿ ತಿಳಿಸಲಾಗಿದೆ.

ಸಮೀಕ್ಷೆ ನಡೆಸಲಾದ ದೇಶಾದ್ಯಂತದ 111 ನಗರಗಳ ಪೈಕಿ ಮಂಗಳೂರಿಗೆ 41ನೇ ಸ್ಥಾನ ಹಾಗೂ ಬೆಂಗಳೂರಿಗೆ 56ನೇ ಸ್ಥಾನ ಲಭಿಸಿದ್ದರೆ ಬೆಳಗಾವಿಗೆ 52ನೇ ಸ್ಥಾನ ದೊರಕಿದೆ. ಸುರಕ್ಷತಾ ವಿಚಾರದಲ್ಲಿ ಮಂಗಳೂರು 33ನೇ ಸ್ಥಾನ ಪಡೆದಿದ್ದರೆ, ಶಿವಮೊಗ್ಗ, ದಾವಣಗೆರೆ, ತುಮಕೂರು, ಧಾರವಾಡ ಹಾಗೂ ಬೆಂಗಳೂರು ಕ್ರಮವಾಗಿ 37, 50, 64, 67 ಹಾಗೂ 107ನೇ ಸ್ಥಾನಗಳಲ್ಲಿವೆ.

ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮಂಗಳೂರು 15ನೇ ಸ್ಥಾನದಲ್ಲಿದ್ದರೆ ಬೆಂಗಳೂರು 58ನೇ ಸ್ಥಾನ ಹಾಗೂ ದಾವಣಗೆರೆ 90ನೇ ಸ್ಥಾನ ಗಳಿಸಿದೆ. ಸಾರಿಗೆ,  ತ್ಯಾಜ್ಯ ನೀರು ಸಂಸ್ಕರಣೆ ವಿಚಾರಗಳಲ್ಲಿಯೂ ಮಂಗಳೂರು ಉತ್ತಮ ಸ್ಥಾನ ಗಳಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರು 33ನೇ ಸ್ಥಾನದಲ್ಲಿದೆ. ಹಲವಾರು ಮೆಡಿಕಲ್ ಕಾಲೇಜುಗಳು ಮತ್ತು ಆಸ್ಪತ್ರೆಗಳಿರುವ  ಬೆಂಗಳೂರು ನಗರವು ಆರೋಗ್ಯ ಕ್ಷೇತ್ರದಲ್ಲಿ  55ನೇ ಸ್ಥಾನ ಪಡೆದಿದ್ದರೆ, ಶಿವಮೊಗ್ಗ, ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಕ್ರಮವಾಗಿ 12ನೇ, 35 ಹಾಗೂ 48ನೇ ಸ್ಥಾನಗಳನ್ನು ಪಡೆದಿವೆ.

ವಿದ್ಯುತ್ ಸರಬರಾಜು ಕ್ಷೇತ್ರಗಳಲ್ಲಿ ಮಂಗಳೂರು 31ನೇ ಸ್ಥಾನ ಪಡೆದು ರಾಜ್ಯದಲ್ಲಿಯೇ ಅಗ್ರ ಸ್ಥಾನ ಪಡೆದಿದೆ. ಸುಮಾರು 78 ಮಾನದಂಡಗಳ ಆಧಾರದಲ್ಲಿ ಈ ರ್ಯಾಂಕಿಂಗ್ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News