ಸ್ಟರ್ಲೈಟ್ ಪ್ರತಿಭಟನಕಾರರ ಮೇಲೆ ಗೋಲಿಬಾರ್ ಪ್ರಕರಣ: ಸಿಬಿಐ ತನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶ

Update: 2018-08-14 12:40 GMT

ಚೆನ್ನೈ, ಆ. 14: ತಮಿಳುನಾಡಿನ ತೂತುಕುಡಿಯಲ್ಲಿ ಮೇ 22ರಂದು ನಡೆದ ಸ್ಟರ್ಲೈಟ್ ವಿರೋಧಿ ಪ್ರತಿಭಟನೆಯ ಸಂದರ್ಭ 13 ಮಂದಿಯ ಸಾವಿಗೆ ಕಾರಣವಾಗಿದ್ದ ಪೊಲೀಸ್ ಗೋಲಿಬಾರ್ ಬಗ್ಗೆ ಸಿಬಿಎ ತನಿಖೆಗೆ ಮುದ್ರಾಸ್ ಉಚ್ಚ ನ್ಯಾಯಾಲಯ ಮಂಗಳವಾರ ಆದೇಶಿಸಿದೆ. ಇದರೊಂದಿಗೆ ತಮಿಳುನಾಡು ಸರಕಾರಕ್ಕೆ ತೀವ್ರ ಹಿನ್ನೆಡೆ ಉಂಟಾಗಿದೆ.

ನಾಲ್ಕು ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಪೊಲೀಸರು ಗುಂಡು ಹಾರಿಸಿರುವುದು ಹಾಗೂ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರತಿಭಟನಕಾರರನ್ನು ವಶದಲ್ಲಿ ಇರಿಸಿಕೊಂಡಿರುವುದರ ವಿರುದ್ಧ ಸಲ್ಲಿಸಲಾಗಿದ್ದ ಮನವಿಗಳ ಗುಚ್ಛವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಟಿ. ಸೆಲ್ವಂ ಹಾಗೂ ಎಂ.ಎಂ. ಬಶೀರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ಜಾರಿ ಮಾಡಿದೆ. ಮದ್ರಾಸ್ ಉಚ್ಚ ನ್ಯಾಯಾಲಯದ ಪ್ರಧಾನ ಪೀಠ ಈ ಆದೇಶ ನೀಡಿದೆ. ನ್ಯಾಯಾಲಯ ತನ್ನ ಆದೇಶವನ್ನು ಮಧುರೈ ಪೀಠದಲ್ಲಿ ಆಗಸ್ಟ್ 1ರಂದು ಕಾದಿರಿಸಿತ್ತು. ಉಚ್ಚ ನ್ಯಾಯಾಲಯದ ಆದೇಶದ ಬಳಿಕ ತಮಿಳುನಾಡು ಸಚಿವ ಡಿ. ಜಯಕುಮಾರ್, ಸಿಬಿಐ ತನಿಖೆಗೆ ನ್ಯಾಯಾಲಯ ಆದೇಶ ನೀಡಿದೆ.

ಈ ಬಗ್ಗೆ ನಿರ್ಧರಿಸಲು ತಮಿಳುನಾಡು ಸರಕಾರ ಸಭೆ ಸೇರಲಿದೆ ಎಂದಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಮಾರ್ಚ್ ನಡೆಸುತ್ತಿದ್ದ ಪ್ರತಿಭಟನಕಾರರನ್ನು ತಡೆಯಲು ಯತ್ನಿಸಿದಾಗ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಘರ್ಷಣೆ ಸಂಭವಿಸಿತ್ತು. ಈ ಸಂದರ್ಭ ಪೊಲೀಸರು ಗುಂಡು ಹಾರಿಸಿದ್ದರು. ಪರಿಸರ ಮಾಲಿನ್ಯದ ಹಿನ್ನೆಲೆಯಲ್ಲಿ ತೂತುಕುಡಿಯಲ್ಲಿರುವ ವೇದಾಂತ ಮಾಲಕತ್ವದ ಸ್ಟರ್ಲೈಟ್ ಘಟಕ ಮುಚ್ಚುವಂತೆ ಪ್ರತಿಭಟನಕಾರರು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News