ಅತಿಥಿ ಗೃಹದಲ್ಲಿ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆದಿತ್ತು: ಕೇರಳ ಹೈಕೋರ್ಟ್‌ಗೆ ಸರಕಾರದ ನಿವೇದನೆ

Update: 2018-08-14 12:43 GMT

ಕೊಚ್ಚಿ, ಆ. 14: ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಆರೋಪದಲ್ಲಿ ಕೇರಳ ಪೊಲೀಸರ ವಿಶೇಷ ತಂಡ ಜಲಂಧರ್‌ನಲ್ಲಿ ರೋಮನ್ ಕೆಥೋಲಿಕ್ ಬಿಷಪ್ ಅವರನ್ನು 4 ಗಂಟೆಗಳ ಕಾಲ ವಿಚಾರಣೆ ನಡೆಸಿತು. ಬಿಷಪ್ ಫ್ರಾಂಕೋ ಮುಲಕ್ಕಾಲ್ ಅವರನ್ನು ಪ್ರಶ್ನಿಸಲು ಕೇರಳ ಪೊಲೀಸ್ ತಂಡ ಸೋಮವಾರ ಜಲಂಧರ್‌ನಲ್ಲಿರುವ ಅವರ ನಿವಾಸ ತಲುಪಿತ್ತು.

ಆದರೆ, ಅವರು ಚಂಡಿಗಢದಲ್ಲಿ ಇದ್ದುದರಿಂದ ಭೇಟಿ ಆಗಲು ಸಾಧ್ಯವಾಗಿರಲಿಲ್ಲ. ಅನಂತರ ಪಂಜಾಬ್ ಪೊಲೀಸರು ಜಲಂಧರ್‌ಗೆ ಹಿಂದಿರುಗಿ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ಬಿಷಪ್ ಅವರಿಗೆ ತಿಳಿಸಿದ್ದರು. ನಾವು ಅವರನ್ನು ಪ್ರಶ್ನಿಸಿದ್ದೇವೆ ಹಾಗೂ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ. ಘಟನೆಯಲ್ಲಿ ಅವರ ಪಾತ್ರದ ಬಗ್ಗೆ ಪರಿಶೀಲಿಸಿದ ಬಳಿಕ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇದು ತುಂಬಾ ಹಳೆಯ ಪ್ರಕರಣ. ಆದುದರಿಂದ ನಾವು ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಕೊಟ್ಟಾಯಂನ ಉಪ ಪೊಲೀಸ್ ಅಧೀಕ್ಷಕ ಕೆ. ಸುಭಾಶ್ ತಿಳಿಸಿದ್ದಾರೆ. ಇದುವರೆಗೆ ತಾನು ಅಮಾಯಕ ಎಂದು ಮುಲಕ್ಕಲ್ ಪ್ರತಿಪಾದಿಸುತ್ತಿದ್ದಾರೆ. ಆದುದರಿಂದ ಅವರನ್ನು ಮೊದಲು ವಿಚಾರಣೆ ನಡೆಸಿ ಪುರಾವೆಗಳನ್ನು ಪರಿಶೀಲಿಸಿ ಬಳಿಕ ಬಂಧಿಸಲಾಗುವುದು ಎಂದು ರಾಜ್ಯ ಸರಕಾರ ಕೇರಳ ಉಚ್ಚ ನ್ಯಾಯಾಲಯಕ್ಕೆ ಸೋಮವಾರ ತಿಳಿಸಿತ್ತು. ಕೇರಳದ ಕೊಟ್ಟಾಯಂ ಜಿಲ್ಲೆಯ ಕುರವಿಲಂಗಾಡ್ ನಲ್ಲಿರುವ ಸಂತ ಫ್ರಾನ್ಸಿಸ್ ಮಿಷನ್ ಹೋಮ್‌ನ ಅತಿಥಿ ಗೃಹದಲ್ಲಿ ಜಲಂಧರದ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರು ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸರಕಾರ ಸೋಮವಾರ ನ್ಯಾಯಾಲಯಕ್ಕೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News