ಅಪ್ರಾಪ್ತೆಯ ಅತ್ಯಾಚಾರ: ಪೊಕ್ಸೊ ಕಾಯ್ದೆಯಡಿ ಆರೋಪಿಗೆ ಶಿಕ್ಷೆ

Update: 2018-08-14 18:40 GMT

ಉಡುಪಿ, ಆ.14: ನಾಲ್ಕು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ವಿಶೇಷ ಪೊಕ್ಸೋ ನ್ಯಾಯಾಲಯವು ಇಂದು ಏಳು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮಲ್ಪೆ ಕೊಳ ನಿವಾಸಿ ಕಾರ್ತಿಕ್(24) ಶಿಕ್ಷೆಗೆ ಗುರಿಯಾದ ಅಪರಾಧಿ. ಈತ 2014ರ ಜ. 6ರಂದು ಮಣಿಪಾಲ ಕಾಲೇಜಿನ 16 ವರ್ಷ ವಯಸ್ಸಿನ ಪ್ರಥಮ ಪಿಯುಸಿ ವಿದ್ಯಾರ್ಥಿಯನ್ನು ಅಪಹರಿಸಿಕೊಂಡು ತಮಿಳುನಾಡು ರಾಜ್ಯದ ಕನ್ಯಾ ಕುಮಾರಿ ಜಿಲ್ಲೆ ಹಾಗೂ ಕೇರಳ ರಾಜ್ಯದ ತಿವೇಂಡ್ರಮ್ ಜಿಲ್ಲೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು ಎಂದು ದೂರಲಾಗಿದೆ. ನೊಂದ ಬಾಲಕಿಯ ತಂದೆ 2014ರ ಜ.9ರಂದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಆರೋಪಿ ವಿರುದ್ಧ ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 2014ರ ಮೇ 6ರಂದು ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ವಿಶೇಷ ಪೊಕ್ಸೊ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ, ಅಭಿಯೋಜನೆ ಪರವಾಗಿ 16 ಸಾಕ್ಷಿ ಗಳನ್ನು ವಿಚಾರಣೆಗೆ ಒಳಪಡಿಸಿ, ಆರೋಪಿಯ ಮೇಲಿನ ಆರೋಪ ಸಾಬೀತಾ ಗಿರುವುದಾಗಿ ಅಭಿಪ್ರಾಯ ಪಟ್ಟರು.

ಅಪಹರಣ, ಅತ್ಯಾಚಾರ ಹಾಗೂ ಪೊಕ್ಸೊ ಕಾಯಿದೆಯಡಿ ಆರೋಪಿಗೆ ಒಟ್ಟು ಏಳು ವರ್ಷಗಳ ಶಿಕ್ಷೆ ಹಾಗೂ 25ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ಇಂದು ತೀರ್ಪು ನೀಡಿದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ(ಪೊಕ್ಸೊ) ವಿಜಯ ವಾಸು ಪೂಜಾರಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News