ಬಂಟ್ವಾಳ: ಅಪಾಯದ ಮಟ್ಟದಿಂದ ಇಳಿದ ನೇತ್ರಾವತಿ ಪ್ರವಾಹ

Update: 2018-08-15 05:04 GMT

ಬಂಟ್ವಾಳ, ಆ.15: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಬಂಟ್ವಾಳ ವ್ಯಾಪ್ತಿಯ ವಿವಿಧ ಪರಿಸರದಲ್ಲಿ ಕಾಣಿಸಿದ್ದ ನೆರೆ ನೀರು ಬುಧವಾರ ಕೊಂಚ ಇಳಿಮುಖವಾಗಿದೆ. ಆದರೂ 9 ಮೀ.ನಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು, ತೀರದ ತಗ್ಗು ಪ್ರದೇಶಗಳಲ್ಲಿ ನೆರೆ ಸ್ಥಿತಿ ಇನ್ನೂ ಹಾಗೆಯೇ ಮುಂದುವರಿದಿದೆ.

ಮಂಗಳವಾರ ರಾತ್ರಿಯ ವೇಳೆ ನೇತ್ರಾವತಿ ನದಿ ನೀರಿನ ಮಟ್ಟ 9.9ಕ್ಕೆ ತಲುಪಿ ಅಪಾಯದ ಮಟ್ಟದಲ್ಲಿ ಹರಿಯುತ್ತಿತ್ತು. ರಾತ್ರಿಯಿಂದ ಮಳೆಯಬ್ಬರ ಒಂದಿಷ್ಟು ಕಡಿಮೆಯಾಗಿರುವುದರಿಂದ ನದಿ ನೀರಿನಲ್ಲಿ ಸ್ವಲ್ಪ ಇಳಿಮುಖವಾಗಿದೆ. ಆದರೂ ಬಂಟ್ವಾಳದಲ್ಲಿ ನೇತ್ರಾವತಿ ನೀರಿನ ಮಟ್ಟ ಇಂದು ಬೆಳಗ್ಗೆ 9 ಮೀ. ಇತ್ತು.

ಬಂಟ್ವಾಳ ನದಿ ತೀರದ ಪ್ರದೇಶಗಳಾದ ಜಕ್ರಿಬೆಟ್ಟು, ಬಡ್ಡಕಟ್ಟೆ, ಆಲಡ್ಕ, ಕಂಚಿಕಾರಪೇಟೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿದೆ. ಇಲ್ಲಿ ಅಪಾಯದ ಮಟ್ಟದಲ್ಲಿ ನೇತ್ರಾವತಿ ನದಿ ನೀರು ಹರಿಯುತ್ತಿರುವುದು ಕಂಡುಬಂದಿತ್ತು.

ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಮತ್ತೆ ಮಳೆಯಾದಲ್ಲಿ ತೀರವಾಸಿಗಳು ಸಂಕಷ್ಟಕ್ಕೆ ಸಿಲುಕುವ ಭೀತಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News