ನೆರೆಯಿಂದಾಗಿ ಸಂಕಷ್ಟದಲ್ಲಿರುವ ಕೇರಳಕ್ಕೆ ನೆರವಾಗುವಂತೆ ಪಿಣರಾಯ್ ವಿಜಯನ್ ಮನವಿ

Update: 2018-08-15 16:30 GMT

ತಿರುವನಂತಪುರ,ಆ.15: ಭಾರೀ ಮಳೆ ಮತ್ತು ನೆರೆಹಾವಳಿಯಿಂದ ತತ್ತರಿಸಿರುವ ಕೇರಳಕ್ಕೆ ಎಲ್ಲ ಕಡೆಗಳಿಂದಲೂ ನೆರವಿಗಾಗಿ ಬುಧವಾರ ಕೋರಿಕೊಂಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು,ರಾಜ್ಯದಲ್ಲಿಯ ಅಭೂತಪೂರ್ವ ಸ್ಥಿತಿಯನ್ನು ಎದುರಿಸಲು ಪ್ರತಿಯೊಬ್ಬರೂ ಸರಕಾರದೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಪ್ರಕೃತಿ ವಿಕೋಪಕ್ಕೆ ಬಲಿಯಾದವರ ಸಂಖ್ಯೆ 40ನ್ನು ದಾಟಿದೆ.

 ‘‘ರಾಜ್ಯವು ಗಂಭೀರ ಸ್ಥಿತಿಯಲ್ಲಿದೆ ಎನ್ನುವುದು ನಿಮಗೆಲ್ಲ ಗೊತ್ತಿದೆ. ಎಲ್ಲ ನದಿಗಳು ಉಕ್ಕಿ ಹರಿಯುತ್ತಿದ್ದು,ಜಲಾಶಯಗಳು ಭರ್ತಿಯಾಗಿವೆ. ಇಂದು ಅನಿವಾರ್ಯವಾಗಿ ಮುಲ್ಲಪೆರಿಯಾರ್ ಜಲಾಶಯದಿಂದ ನೀರನ್ನು ಹೊರಗೆ ಬಿಟ್ಟಿದ್ದೇವೆ. ಎರ್ನಾಕುಲಂ,ಕೊಟ್ಟಾಯಂ ಮತ್ತು ಪಟ್ಟಣಂಥಿಟ್ಟ ಜಿಲ್ಲೆಗಳಿಗೆ ಈ ನೀರು ತಲುಪಿದೆ. ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ನಮಗೆ ಎಲ್ಲ ಕಡೆಗಳಿಂದಲೂ ನೆರವು ಅಗತ್ಯವಾಗಿದೆ ಮತ್ತು ಸಾವುನೋವುಗಳನ್ನು ಕನಿಷ್ಠಗೊಳಿಸಲು ಸರಕಾರವು ಬದ್ಧವಾಗಿದೆ. ಇನ್ನೂ ನಾಲ್ಕು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿರುವುದರಿಂದ ನಾವು ಇನ್ನಷ್ಟು ಕಟ್ಟೆಚ್ಚರದಿಂದ ಇರಬೇಕಾಗಿದೆ. ಈ ಸವಾಲನ್ನು ಯಶಸ್ವಿಯಾಗಿ ಎದುರಿಸುತ್ತೇವೆ ಎಂಬ ವಿಶ್ವಾಸ ನನಗಿದೆ ’’ ಎಂದು ವಿಜಯನ್ ಹೇಳಿದರು.

ಸುರಿಯುತ್ತಿದ್ದ ಮಳೆಯಲ್ಲಿಯೇ ಇಲ್ಲಿ ಸ್ವಾತಂತ್ರ ದಿನದ ಭಾಷಣವನ್ನು ಮಾಡಿದ ಅವರು,ಕಳೆದ 94 ವರ್ಷಗಳಲ್ಲಿಯೇ ಅತ್ಯಂತ ಭೀಕರ ನೆರೆ ಹಾವಳಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ಉದಾರ ದೇಣಿಗೆಗಳನ್ನು ನೀಡುವಂತೆ ಜನತೆಯನ್ನು ಆಗ್ರಹಿಸಿದರು.

ನೆರೆಯಿಂದಾಗಿ ರಾಜ್ಯವು ವಿನಾಶಗೊಂಡಿರುವ ಸಂದರ್ಭದಲ್ಲಿ ನಾವು ಈ ವರ್ಷದ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದ್ದೇವೆ. ಇದು ರಾಜ್ಯವು ಹಿಂದೆಂದೂ ಕಂಡರಿಯದ ಪ್ರಕೃತಿ ವಿಕೋಪವಾಗಿದೆ. ಆದರೆ ನಾವೆಲ್ಲರೂ ಕೈಗಳನ್ನು ಜೋಡಿಸಿದರೆ ಯಾವುದೇ ವಿಪತ್ತನ್ನು ಎದುರಿಸಲು ನಾವು ಸಮರ್ಥರಾಗುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News