ತನ್ನ ವಿರುದ್ಧ ಪುಸ್ತಕ ಬರೆದ ಮಾಜಿ ಸಹಾಯಕಿಯನ್ನು ‘ನಾಯಿ’ ಎಂದ ಟ್ರಂಪ್

Update: 2018-08-15 16:44 GMT

ವಾಶಿಂಗ್ಟನ್, ಆ. 15: ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಮಾಡಿಕೊಂಡಿದ್ದ ಧ್ವನಿಮುದ್ರಿಕೆಗಳನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸುತ್ತಿರುವ ಶ್ವೇತಭವನದ ಮಾಜಿ ಸಹಾಯಕಿ ಒಮರೋಸಾ ಮ್ಯಾನಿಗಾಲ್ಟ್ ನ್ಯೂಮನ್ ವಿರುದ್ಧ ಆಕ್ರೋಶಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಕೆಯನ್ನು ‘ನಾಯಿ’ ಎಂಬುದಾಗಿ ಕರೆದಿದ್ದಾರೆ.

ಶ್ವೇತಭವನದಲ್ಲಿ ತಾನು ಕೆಲಸ ಮಾಡಿದ ಅವಧಿಯಲ್ಲಿನ ತನ್ನ ಅನುಭವಗಳನ್ನೊಳಗೊಂಡ ಪುಸ್ತಕ ‘ಅನ್‌ಹಿಂಜ್ಡ್’ನ್ನು ನ್ಯೂಮನ್ ಬಿಡುಗಡೆಗೊಳಿಸಿದ ಬಳಿಕ, ಆಕೆಯ ವಿರುದ್ಧದ ವಾಗ್ದಾಳಿಯನ್ನು ಟ್ರಂಪ್ ಹೆಚ್ಚಿಸಿದ್ದಾರೆ.

ಟ್ರಂಪ್ ಅಧ್ಯಕ್ಷರಾಗುವುದಕ್ಕೂ ಮುನ್ನ ನಡೆಸಿಕೊಟ್ಟಿದ್ದ ‘ದಿ ಅಪ್ರೆಂಟಿಸ್’ ಎಂಬ ರಿಯಾಲಿಟಿ ಶೋನಲ್ಲಿ ನ್ಯೂಮನ್ ಸ್ಪರ್ಧಿಯಾಗಿದ್ದರು ಎಂಬುದನ್ನು ಸ್ಮರಿಸಬಹುದಾಗಿದೆ.

ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷರ ಕಟ್ಟಾ ಕರಿಯ ಬೆಂಬಲಿಗರ ಪೈಕಿ ಒಬ್ಬರಾಗಿದ್ದರು.

ಅವರನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಶ್ವೇತಭವನದ ಕೆಲಸದಿಂದ ಉಚ್ಚಾಟಿಸಲಾಗಿತ್ತು.

ತನ್ನ ಉಚ್ಚಾಟನೆ ವೇಳೆ ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥ ಜಾನ್ ಕೆಲ್ಲಿ ಆಡಿದ ಮಾತುಗಳ ಧ್ವನಿಮುದ್ರಿಕೆ ಹಾಗೂ ಟ್ರಂಪ್ ಮಾಡಿದ ಫೋನ್ ಕರೆಯೊಂದರ ಧ್ವನಿಮುದ್ರಿಕೆಯನ್ನು ನ್ಯೂಮನ್ ಸಾರ್ವಜನಿಕವಾಗಿ ಬಿಡುಗಡೆಗೊಳಿಸಿದ್ದರು.

 ನ್ಯೂಮನ್‌ರ ಉಚ್ಚಾಟನೆ ಬಗ್ಗೆ ತನಗೆ ತಿಳಿದಿಲ್ಲ ಎಂಬುದಾಗಿ ಈ ಫೋನ್ ಕರೆಯ ವೇಳೆ ಟ್ರಂಪ್ ಹೇಳುತ್ತಾರೆ.

  ಮಂಗಳವಾರ ಟ್ವೀಟ್ ಮಾಡಿದ ಟ್ರಂಪ್, ‘‘ನೈತಿಕತೆ ಇಲ್ಲದ ಹುಚ್ಚಿಗೆ ಸಹಾಯ ಮಾಡಿದೆ ಹಾಗೂ ಶ್ವೇತಭವನದಲ್ಲಿ ಕೆಲಸ ನೀಡಿದೆ. ಆದರೆ, ಅದು ಫಲಪ್ರದವಾಗಲಿಲ್ಲ. ಆ ನಾಯಿಯನ್ನು ಬೇಗನೇ ಒದ್ದೋಡಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದೀರಿ ಜನರಲ್ ಕೆಲ್ಲಿ ಅವರೇ!’’ ಎಂದು ಹೇಳಿದ್ದಾರೆ.

ಟ್ರಂಪ್ ಆಡಿದ ಜನಾಂಗೀಯ ಅವಹೇಳನ ಪದ

ಸಿಬಿಎಸ್ ನ್ಯೂಸ್ ಮಂಗಳವಾರ ಇನ್ನೊಂದು ಧ್ವನಿಮುದ್ರಿಕೆಯನ್ನು ಬಿಡುಗಡೆಗೊಳಿಸಿದೆ.

‘ದಿ ಅಪ್ರೆಂಟಿಸ್’ನ ಚಿತ್ರೀಕರಣದ ವೇಳೆ ಟ್ರಂಪ್ ಜನಾಂಗೀಯ ನಿಂದನೆ ಪದವನ್ನು ಆಡುವುದನ್ನು ತೋರಿಸುವ ಧ್ವನಿಮುದ್ರಿಕೆಯ ಸಂಭಾವ್ಯ ಪರಿಣಾಮದ ಬಗ್ಗೆ 2016 ಅಕ್ಟೋಬರ್‌ನಲ್ಲಿ ನ್ಯೂಮನ್ ಮತ್ತು ಟ್ರಂಪ್‌ರ ಇತರ ಹಲವಾರು ಚುನಾವಣಾ ಪ್ರಚಾರ ಸಹಾಯಕರು ಚರ್ಚಿಸುವುದು ಈ ಧ್ವನಿಮುದ್ರಿಕೆಯಲ್ಲಿದೆ.

ಇಂಥ ಯಾವುದೇ ಧ್ವನಿಮುದ್ರಿಕೆ ಅಸ್ತಿತ್ವದಲ್ಲಿಲ್ಲ ಎಂದು ಟ್ರಂಪ್ ಸೋಮವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News