ಅಫ್ಘಾನ್: ತಪಾಸಣಾ ಠಾಣೆಗಳ ಮೇಲೆ ತಾಲಿಬಾನ್ ದಾಳಿ; 30 ಸಾವು

Update: 2018-08-15 16:44 GMT

ಕಾಬೂಲ್, ಆ. 15: ಉತ್ತರ ಅಫ್ಘಾನಿಸ್ತಾನದ ಎರಡು ತಪಾಸಣಾ ಠಾಣೆಗಳ ಮೇಲೆ ತಾಲಿಬಾನ್ ನಡೆಸಿದ ದಾಳಿಯಲ್ಲಿ ಕನಿಷ್ಠ 30 ಸೈನಿಕರು ಮತ್ತು ಪೊಲೀಸರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಕಳೆದ ವಾರ ಪೂರ್ವದ ನಗರ ಘಝ್ನಿಯ ಮೇಲೆ ತಾಲಿಬಾನಿ ಉಗ್ರರು ನಡೆಸಿದ ಭೀಕರ ದಾಳಿಯಿಂದ ನಗರ ಚೇತರಿಸಿಕೊಳ್ಳುತ್ತಿರುವಾಗಲೇ ಹೊಸ ದಾಳಿ ನಡೆದಿದೆ. ಘಝ್ನಿ ನಗರದ ಹಲವು ಉಪನಗರಗಳಲ್ಲಿ ಗುಂಡಿನ ಕಾಳಗ ಈಗಲೂ ಮುಂದುವರಿದಿದೆ.

ಬಾಗ್ಲನಿ ಮಾರುಕಟ್ಟೆ ಜಿಲ್ಲೆಯಲ್ಲಿ ಮಂಗಳವಾರ ತಡ ರಾತ್ರಿ ದಾಳಿ ನಡೆಸಿದ ಬಳಿಕ ಭಯೋತ್ಪಾದಕರು ಎರಡೂ ತಪಾಸಣಾ ಠಾಣೆಗಳಿಗೆ ಬೆಂಕಿ ಹಚ್ಚಿದರು ಎಂದು ಬಾಗ್ಲನ್ ಪ್ರಾಂತದ ಪ್ರಾಂತೀಯ ಕೌನ್ಸಿಲ್ ಮುಖ್ಯಸ್ಥ ಮುಹಮ್ಮದ್ ಸಫ್ದರ್ ಮುಹ್ಸಿನ್ ಹೇಳಿದರು.

ಒಂದು ಸೇನಾ ತಪಾಸಣಾ ಠಾಣೆ ಹಾಗೂ ಇನ್ನೊಂದು ತಥಾಕಥಿತ ‘ಸ್ಥಳೀಯ ಪೊಲೀಸ್’ ಠಾಣೆಯ ಮೇಲೆ ದಾಳಿ ನಡೆಯಿತು ಎಂದು ಅವರು ತಿಳಿಸಿದರು.

ಈ ‘ಸ್ಥಳೀಯ ಪೊಲೀಸರು’ ಸರಕಾರದ ಪರವಾಗಿ ಉಗ್ರರ ವಿರುದ್ಧ ಹೋರಾಡುತ್ತಿರುವ ಬಾಡಿಗೆ ಸೈನಿಕರು. ಅವರನ್ನು ಆಂತರಿಕ ಸಚಿವಾಲಯ ನೇಮಿಸುತ್ತದೆ ಹಾಗೂ ಅವರಿಗೆ ವೇತನ ಕೊಡುತ್ತದೆ.

ದಾಳಿಯ ಹೊಣೆಯನ್ನು ತಾಲಿಬಾನ್ ವಕ್ತಾರ ಝಬೀಯುಲ್ಲಾ ಮುಜಾಹಿದ್ ವಹಿಸಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News