ಜನಾಂಗೀಯ ನಿಂದನೆ ಬಳಿಕ ಭಾರತೀಯನ ವ್ಯಾಪಾರ ದ್ವಿಗುಣ

Update: 2018-08-15 16:46 GMT

 ನ್ಯೂಯಾರ್ಕ್, ಆ. 15: ಭಾರತ ಮೂಲದ ಅಮೆರಿಕದ ರೆಸ್ಟೋರೆಂಟೊಂದರ ಮಾಲೀಕರನ್ನು ಗ್ರಾಹಕನೊಬ್ಬ ಜನಾಂಗೀಯವಾಗಿ ನಿಂದಿಸಿದ ಬಳಿಕ, ರೆಸ್ಟೋರೆಂಟ್‌ನ ವ್ಯಾಪಾರದಲ್ಲಿ ಹೆಚ್ಚಳವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಅಮೆರಿಕದ ಕೆಂಟಕಿ ರಾಜ್ಯದ ಆ್ಯಶ್‌ಲ್ಯಾಂಡ್ ನಗರದಲ್ಲಿರುವ ‘ದ ಕಿಂಗ್ಸ್ ಡೈನರ್’ ಮಾಲೀಕ ತಾಜ್ ಸರ್ದಾರ್ ಹಾಗೂ ಅವರ ಕುಟುಂಬಿಕರನ್ನು ‘ಭಾರತದ ಬುಡಕಟ್ಟು ಜನರು’ ಎಂಬುದಾಗಿ ಅಲ್ಲಿ ಊಟ ಮಾಡಿದ ಗ್ರಾಹಕ ಬಣ್ಣಿಸಿದನು ಎಂದು ಡಬ್ಲುಎಸ್‌ಎಝಡ್ ಟಿವಿ ವರದಿ ಮಾಡಿದೆ.

ಬಳಿಕ ಆ ವ್ಯಕ್ತಿಯು ರೆಸ್ಟೋರೆಂಟ್‌ನ ಫೋಟೊ ತೆಗೆದು ಫೇಸ್‌ಬುಕ್‌ನಲ್ಲಿ ಹಾಕಿದನು ಹಾಗೂ ಅಲ್ಲಿನ ಆಹಾರ ಮತ್ತು ಮನುಷ್ಯರ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದನು.

‘‘ನಾನು ಮನಸ್ಸಿಲ್ಲದ ಮನಸ್ಸಿನಿಂದ ಒಳ ಹೊಕ್ಕೆ. ನನ್ನನ್ನು ಭಾರತದ ಬುಡಕಟ್ಟು ಜನರು ಸ್ವಾಗತಿಸಿದರು. ನಾನು ಅಲ್-ಖಾಯ್ದಕ್ಕೆ ದೇಣಿಗೆ ನೀಡಿರುವ ಸಾಧ್ಯತೆಯಿದೆ’’ ಎಂದು ಅವನು ಫೇಸ್‌ಬುಕ್‌ನಲ್ಲಿ ಬರೆದಿದ್ದಾನೆ.

ಇದರ ಬಳಿಕ, ರೆಸ್ಟೋರೆಂಟ್‌ನ ವ್ಯಾಪಾರ ದ್ವಿಗುಣಗೊಂಡಿದೆ ಎಂದು ಮಾಲೀಕ ತಾಜ್ ಸರ್ದಾರ್ ಹೇಳುತ್ತಾರೆ.

‘‘ಈ ವಿಷಯದಲ್ಲಿ ನಗರದ ಜನತೆ ನನಗೆ ಬೆಂಬಲ ನೀಡಿದ್ದಾರೆ. ನನ್ನ ರೆಸ್ಟೋರೆಂಟ್ ಜನರಿಂದ ತುಂಬಿದೆ’’ ಎಂದಿದ್ದಾರೆ.

ಆ್ಯಶ್‌ಲ್ಯಾಂಡ್ ನಗರದ ಮೇಯರ ಹಾಗೂ ಕಮಿಶನರ್‌ಗಳೂ ಅಲ್ಲಿಗೆ ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News