ಭಾರತ ದೇಶ ವಿಶ್ವಕ್ಕೆ ಆದರ್ಶ- ಡಾ.ಡಿ.ವೀರೇಂದ್ರ ಹೆಗ್ಗಡೆ

Update: 2018-08-15 18:54 GMT

ಮೂಡುಬಿದಿರೆ, ಆ.15: ಭಾರತವನ್ನು ವಿಶ್ವವು ಐ.ಟಿ ಸೆಂಟರ್ ಆಗಿ ನೋಡುತ್ತಿದ್ದು ಜಗತ್ತಿನ ಉನ್ನತ ಕಂಪೆನಿಗಳನ್ನು ನಡೆಸುವಲ್ಲಿ ಭಾರತೀಯರೇ ಮುಂದಾಗಿದ್ದಾರೆ, ರಾಷ್ಟ್ರದ ಧ್ವಜದಲ್ಲಿರುವ ಕೇಸರಿ ಬಣ್ಣ ಕೈಗಾರಿಕೆ, ಉದ್ದಿಮೆಯ ಪ್ರತೀಕವಾಗಿದ್ದು ಹಸಿರು ಬಣ್ಣ ಕೃಷಿಯ ಉನ್ನತಿಯ ದ್ಯೋತಕವಾಗಿದೆ. ಬಿಳಿಯ ಬಣ್ಣ ಇವುಗಳ ನಡುವಿರಬೇಕಾದ ಹೋದಾಣಿಕೆಯನ್ನು ತೋರಿಸುತ್ತಿದೆ ಆ ನಿಟ್ಟಿನಲ್ಲಿ ಭಾರತ ದೇಶ ವಿಶ್ವಕ್ಕೆ ಆದರ್ಶವಾಗಿದೆಯೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ 72ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಗೈದು ಮಾತನಾಡಿದ ಅವರು ದೇಶದಲ್ಲಿ ಪ್ರಗತಿ ಉಂಟಾಗುತ್ತಿರುವುದರಿಂದ ಯುವಜನತೆ ಆಲಸಿಗಳಾಗದೆ, ತ್ಯಾಗ ಮನೋಭಾವನೆಯಿಂದ ಮುಂದುವರಿಯಬೇಕು. ತಮಿಳರು, ತೆಲುಗರು, ಕನ್ನಡಿಗರು, ಮರಾಠರು, ಎಂದು ನಮ್ಮನ್ನು ನಾವು ಬೇಧ ಮಾಡಿಕೊಂಡರೆ ನಾವು ಬೇರೆಯವರ ದಾಸರಾಗುವುದು ಶತಸಿದ್ಧ.

ಏಕಮನಸ್ಸಿನಿಂದ, ಒಗ್ಗಟ್ಟಿನಿಂದ ನಾವು ಸಶಕ್ತರಾಗಬೇಕು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದುವರಿಯಬೇಕು, ಜಗತ್ತಿನಾದ್ಯಂತ ಗಮನಿಸಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಶ್ಲಾಘನೀಯ ಸಂಗತಿ ಎಂದು ಹೇಳಿದರು.

ವೇದಿಕೆಯಲ್ಲಿ ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್, ಕೆ. ಅಮರನಾಥ ಶೆಟ್ಟಿ, ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕಿ ದೀಪ ರತ್ನಾಕರ್ ಕಾರ್ಯಕ್ರಮ ನಿರೂಪಿಸಿದರು. ಈ ಸ್ವಾತಂತ್ರ್ಯ ಸಂಭ್ರಮವನ್ನು ಸುಮಾರು ಇಪ್ಪತ್ತು ಸಾವಿರ ಮಂದಿ ಕಣ್ತುಂಬಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News