ಕಾಪು ತಾಲ್ಲೂಕು ಕೇಂದ್ರದಲ್ಲಿ ಸ್ವಾತಂತ್ರೋತ್ಸವ ಆಚರಣೆ

Update: 2018-08-15 18:57 GMT

ಕಾಪು, ಆ. 15: ಕಾಪು ತಾಲ್ಲೂಕು ಆಡಳಿತ ಮತ್ತು ಪುರಸಭೆಯ ವತಿಯಿಂದ ಸ್ವಾತಂತ್ರೋತ್ಸವ ಆಚರಣೆಯು ಕಾಪುವಿನ ಬಂಗ್ಲೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.

ತಾಲ್ಲೂಕು ತಹಶೀಲ್ದಾರ್ ಗುರುಸಿದ್ಧಯ್ಯ ಹಿರೇಮಠ್ ಮಾತನಾಡಿ, ಯುವಸಮುದಾಯ ದುಶ್ಟಟಗಳಿಗೆ ಬಲಿಯಾಗುತಿದ್ದು, ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿ ಸ್ವಾತಂತ್ರ ಹೋರಾಟಗಾರರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಕರೆ ನೀಡಿದರು.

ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಕಾಪು ತಾಲ್ಲೂಕಿನ ಸಮಗ್ರ ಯೋಜನಾ ಬದ್ಧವಾಗಿ ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ತಾಲ್ಲೂಕು ಕಚೇರಿ ಕಾಪುವಿನಲ್ಲಿ ಆರಂಭವಾಗಿದ್ದು, ತಾಲ್ಲೂಕಿಗೆ ಸಂಬಂಧಪಟ್ಟ 35 ಇಲಾಖೆಗಳನ್ನು ಹಂತ ಹಂತವಾಗಿ ಇಲ್ಲಿ ಆರಂಭಿಸಲು ಸರ್ಕಾರಕ್ಕಾಗಿ ಈಗಾಗಲೇ ಪತ್ರಮೂಲಕ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆರೋಗ್ಯ, ಕ್ರೀಡಾ, ತಾಲ್ಲೂಕು ಪಂಚಾಯ್ತಿ, ಶಿಕ್ಷಣ ಇಲಾಖೆ ಸಹಿತ 35ಇಲಾಖೆಗಳನ್ನು ಆರಂಭಿಸಲಾಗುವುದು ಎಂದರು. ಅಕ್ಟೋಬರ್ 2ರಂದು 150ನೇ ಗಾಂಧೀಜಿ ಜನ್ಮದಿನಾಚರಣೆ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರೆಯಂತೆ ಪ್ರಯುಕ್ತ ಕಾಪು ಕ್ಷೇತ್ರದಾದ್ಯಂತ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಕಾಪು ಪುರಸಭಾ ಅಧ್ಯಕ್ಷೆ ಮಾಲಿನಿ ಮಾತನಾಡಿ, ಕಾರ್ಯಕ್ರಮದಲ್ಲಿ ಮಾತನಾಡಿದ ಪುರಸಭಾ ಅಧ್ಯಕ್ಷೆ ಮಾಲಿನಿ ಕಾಪುವನ್ನು ತಾಲ್ಲೂಕಾಗಿ ರಚನೆ ಮಾಡಲು ಮಾಜಿ ಸಚಿವ ವಿನಯಕುಮಾರ್ ಸೊರಕೆ, ಹೋರಾಟ ಸಮಿತಿಯ ಅಧ್ಯಕ್ಷ ಲೀಲಾಧರ ಶೆಟ್ಟಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರನ್ನು ನಾವು ಎಂದೂ ಮರೆಯಬಾರದು ಎಂದು ಹೇಳಿದರು.

ಮಹಿಳೆ ಸ್ವತಂತ್ರವಾಗಿ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಅಲ್ಲದೆ ಬಡತನ, ಭ್ರಷ್ಟಾಚಾರ, ನಿರುದ್ಯೋಗ ನಿರ್ಮೂಲನೆ ದೇಶಕ್ಕೆ ದೊರಕುವ ನಿಜಾರ್ಥದ ಸ್ವಾತಂತ್ರ ಎಂದರು. ಪುರಸಭಾ ಉಪಾಧ್ಯಕ್ಷ ಕೆ.ಎಚ್.ಉಸ್ಮಾನ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಶಿಲ್ಪಾ ಜಿ.ಸುವರ್ಣ, ಶಿಕ್ಷಣ ಸಂಯೋಜಕ ಕೆ.ಶಂಕರ್, ಸ್ಥಾಯಿ ಸಮಿತಿಯ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಕಾಪು ವೃತ್ತ ನಿರೀಕ್ಷಕ ವಿ.ಎಸ್.ಹಾಲಮೂರ್ತಿ ಉಪಸ್ಥಿತರಿದ್ದರು.

ಕಾಪು ಎಸ್.ಐ. ನಿತ್ಯಾನಂದ ಗೌಡ ನೇತೃತ್ವದ ತಂಡ, ಶಾಲೆ ಎನ್‌ಎಸ್‌ಎಸ್ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಪಥಸಂಚಲಕ ನಡೆಯಿತು. ಇದೇ ಸಂದರ್ಭದಲ್ಲಿ ಕಾಪು ತಾಲ್ಲೂಕಿನ ಪ್ರತಿಭೆಗಳಾದ ಚೈತ್ ಸಾಲ್ಯಾನ್, ಶಶಾಂಕ್ ಸಾಲ್ಯಾನ್, ದೀಪ್ತಿ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಬಳಿಕ ಪುರಸಭಾ ವ್ಯಾಪ್ತಿಯ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ಸ್ವಾಗತಿಸಿದರು. ಕರಂದಾಡಿ ಶಾಲಾ ಮುಖ್ಯಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
ಪ್ಲಾಸ್ಟಿಕ್ ಚಮಚ ಬಳಕೆ: ಮುಖ್ಯಾಧಿಕಾರಿಯಿಂದ ತರಾಟೆ

ಸ್ವಾಂತತ್ರೋತ್ಸವ ಕಾರ್ಯಕ್ರಮ ಅಂಗವಾಗಿ ಚಾ, ತಿಂಡಿ ವ್ಯವಸ್ಥೆಯನ್ನು ಮಾಡಲಾಗಿತ್ತು. ತಿಂಡಿಯನ್ನು ಪೇಪರ್ ಪ್ಲೇಟ್ ಬಳಕೆ ಮಾಡಿದರೆ ತಿಂಡಿ ತಿನ್ನಲು ಪ್ಲಾಸ್ಟಿಕ್ ಚಮಚ ಬಳಕೆ ಮಾಡಲಾಗಿತ್ತು. ತಿಂಡಿ ತಿನ್ನುವ ಸ್ಥಳಕ್ಕೆ ತೆರಳಿದ ಮುಖ್ಯಾಧಿಕಾರಿ ರಾಯಪ್ಪ, ಪ್ಲಾಸ್ಟಿಕ್ ಚಮಚ ಕಂಡ ಅಸಮಾಧಾನ ವ್ಯಕ್ತಪಡಿಸಿದರು.

ತಿಂಡಿ ವ್ಯವಸ್ಥೆಯನ್ನು ಮಾಡಿದ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡು ಇನ್ನು ಮುಂದೆ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುವಂತಿಲ್ಲ. ಒಂದು ವೇಳೆ ತಂದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿ ತಂದಿದ್ದ ಎಲ್ಲಾ ಪ್ಲಾಸ್ಟಿಕ್ ಚಮಚವನ್ನು ವಶಪಡಿಸಿಕೊಂಡು ಶಾಲಾ ಮಕ್ಕಳಲ್ಲಿ ಕೈಯಲ್ಲಿಯೇ ತಿನ್ನಿ ಎಂದು ಹೇಳಿ ಹೊರಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News