ಸುಬ್ರಹ್ಮಣ್ಯದಲ್ಲಿ ಉಕ್ಕಿ ಹರಿಯುತ್ತಿರುವ ಕುಮಾರಧಾರ: 15 ಮನೆಗಳು ಮುಳುಗಡೆ

Update: 2018-08-16 04:29 GMT

ಸುಬ್ರಹ್ಮಣ್ಯ, ಆ.16: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆಯ ಅಬ್ಬರ ಮತ್ತೆ ಜೋರಾಗಿದ್ದು, ಕುಮಾರಧಾರ ಮತ್ತು ಅದರ ಉಪ ನದಿ ದರ್ಪಣ ತೀರ್ಥ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಇದರಿಂದ ತೀರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಹಲವು ಮನೆ, ಕೃಷಿ ತೋಟಗಳಿಗೆ ನೀರು ನುಗ್ಗಿದೆ. ಸುಳ್ಯ ತಾಲೂಕಿನ ಎಲ್ಲಾ ಶಾಲೆಗಳಿಗೆ ಇಂದು (ಆ.16) ರಜೆ ಘೋಷಿಸಿ ತಹಶೀಲ್ದಾರ್ ಆದೇಶಿಸಿದ್ದಾರೆ.

ಕುಲ್ಕುಂದ ಕುದುರೆಮಜಲು ಎಂಬಲ್ಲಿ ಸುಮಾರು 15 ಕುಟುಂಬಗಳ ಮನೆಗಳು ಭಾಗಶಃಮುಳುಗಡೆಯಾಗಿವೆ. ಸ್ಥಳಕ್ಕೆ ಮಧ್ಯರಾತ್ರಿಯೇ ಅಧಿಕಾರಿಗಳು ಧಾವಿಸಿ ಅವರನ್ನು ಸಮೀಪದ ಶಾಲೆಗೆ ಸ್ಥಳಾಂತರಿಸಿ ಆಶ್ರಯ ವ್ಯವಸ್ಥೆ ಕಲ್ಪಿಸಿದ್ದಾರೆ.

ಕೊಲ್ಲಮೊಗ್ರು ಗೋಳಿಯಡಿ ಎಂಬಲ್ಲಿ ಮನೆಯೊಂದರ ಗೋಡೆ ಕುಸಿದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಕೊಲ್ಲಮೊಗ್ರು ರಾಮಣ್ಣ ಗೌಡ ಎಂಬವರ ಮನೆಯ ಹಿಂಬದಿಯ ದರೆ ಕುಸಿದ ಪರಿಣಾಮ ಮನೆಯ ಗೋಡೆಯು ಕುಸಿದು ಬಿದ್ದಿದೆ. ಈ ವೇಳೆ ಮನೆಯೊಳಗಿದ್ದ ರಾಮಣ್ಣ ಗೌಡರ ತಾಯಿಯ ಮೇಲೆ ಗೋಡೆ ಬಿದ್ದು ಅವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯದ ಸ್ನಾನ ಘಟ್ಟದಲ್ಲಿರುವ ಶೌಚಾಲಯ, ಡ್ರೆಸ್ಸಿಂಗ್ ರೂಂ ಸಂಪೂರ್ಣ ಮುಳುಗಡೆಯಾಗಿವೆ. ಇಲ್ಲಿರುವ ಅಂಗಡಿ ಮುಂಗಟ್ಟುಗಳು ಭಾಗಶಃ ಜಲಾವೃತಗೊಂಡಿವೆ. ಈ ನಡುವೆ ದರ್ಪಣ ತೀರ್ಥ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಪಂಜ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಸಂಜೆ 4 ಗಂಟೆಯಿಂದಲೇ ಸಂಚಾರ ಸ್ಥಗಿತಗೊಂಡಿದೆ. ಮಂಜೇಶ್ವರ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪಂಜ ಸೇತುವೆ ಕೂಡ ಮುಳುಗಡೆಯಾಗಿದೆ.

ಕೃಷಿ ತೋಟಗಳಿಗೆ ನೀರು ನುಗ್ಗಿದ ಪರಿಣಾಮ ತೋಟದ ಅಂಚಿನ ಮನೆಗಳ ಜನರಲ್ಲಿ ಮನೆಮಾಡಿದ ಆತಂಕ ಮಾಡಿದೆ. ಕುಲ್ಕುಂದ, ನೂಚಿಲ ಮುಂತಾದ ಕಡೆಗಳಲ್ಲಿ ಕೃಷಿ ತೋಟ, ಮನೆಗಳಿಗೆ ನೀರು ನುಗ್ಗುತ್ತಿದ್ದು, ತೀರವಾಸಿಗಳು ಭಯಭೀತರಾಗಿದ್ದಾರೆ.

ಸುಬ್ರಹ್ಮಣ್ಯ ಪರಿಸರದ ಕಲ್ಮಕಾರು, ಬಾಳುಗೋಡು, ಗುತ್ತಿಗಾರು, ಬಳ್ಪ, ಏನೆಕಲ್, ಪಂಜ ಎಲ್ಲ ಕಡೆಗಳಲ್ಲಿ ಸೇತುವೆಗಳು ಮುಳುಗಡೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News