ನಿಯಮ ಮೀರಿ ಭೂಸ್ವಾಧೀನಕ್ಕೆ ಸಿದ್ಧತೆ: ದ.ಕ. ಉಸ್ತುವಾರಿ ಸಚಿವರ ಕಚೇರಿಗೆ ಮುತ್ತಿಗೆಯ ಎಚ್ಚರಿಕೆ

Update: 2018-08-16 14:36 GMT

ಮಂಗಳೂರು, ಆ.16: ತಾಲೂಕಿನ ಕುತ್ತೆತ್ತೂರು ಹಾಗೂ ಪೆರ್ಮುದೆ ಗ್ರಾಮಗಳಲ್ಲಿ ಕೆಐಎಡಿಬಿಯು ನಿಯಮಗಳನ್ನು ಗಾಳಿಗೆ ತೂರಿ ಭೂಸ್ವಾಧೀನಕ್ಕೆ ಮುಂದಾಗಿರುವ ಆಕ್ಷೇಪದ ಕುರಿತಂತೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಿರುವ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮೌನ ವಹಿಸಿದ್ದಾರೆ. ಈ ಬಗ್ಗೆ ಆ.20ರೊಳಗೆ ಅವರು ಸೂಕ್ತ ಉತ್ತರ ನೀಡದಿದ್ದಲ್ಲಿ ಅವರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಮುಂದೆ ದಿಲ್ಲಿ ಚಲೋ ಕಾರ್ಯಕ್ರಮವನ್ನೂ ಆಯೋಜಿಸುವುದಾಗಿ ಕೃಷಿ ಭೂಮಿ ಸಂರಕ್ಷಣಾ ಸಮಿತಿ ಎಚ್ಚರಿಕೆ ನೀಡಿದೆ. 

ಸುದ್ದಿಗೋಷ್ಠಿಯಲ್ಲಿಂದು ಕೃಷಿ ಭೂಮಿ ಸಂರಕ್ಷಣಾ ಸಮಿತಿ(ಪೆರ್ಮುದೆ, ತೆಂಕ ಎಕ್ಕಾರು, ಕುತ್ತ್ತೆತ್ತೂರು, ದೇಲಂತಬೆಟ್ಟು ಗ್ರಾಮಗಳು)ಯ ಕಾರ್ಯದರ್ಶಿ ಲಾರೆನ್ಸ್ ಡಿಕುನ್ಹ ಮಾತನಾಡಿ, ಸಮಿತಿಯು ಜೂನ್ 10 ಮತ್ತು 14ರಂದು ಅಕ್ರಮವಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತಿರುವ ಕುರಿತಂತೆ ಸಚಿವರಿಗೆ ಮನವಿ ಸಲ್ಲಿಸಿದ ಸಂದರ್ಭ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದ್ದರು. ಆದರೆ ಸಚಿವರ ಆದೇಶವನ್ನು ಜಿಲ್ಲಾಡಳಿತ ಕಡೆಗಣಿಸಿದೆ. ಇದರಿಂದಾಗಿ ಉಸ್ತುವಾರಿ ಸಚಿವರು ಕೇವಲ ಉತ್ಸವ ಮೂರ್ತಿ ಮಾತ್ರವೇ ಎಂಬ ಸಂಶಯ ತಮ್ಮನ್ನು ಕಾಡುತ್ತಿರುವುದಾಗಿ ಆಕ್ಷೇಪಿಸಿದರು.

ಎಂಆರ್‌ಪಿಎಲ್‌ನ ವಿಸ್ತರಣಾ ಯೋಜನೆಗಾಗಿ ತಾಲೂಕಿನ ಕುತ್ತೆತ್ತೂರು ಹಾಗೂ ಪೆರ್ಮುದೆಯ 829.2269 ಎಕರೆ ಕೃಷಿ ಭೂಮಿಯನ್ನು ಭೂಸ್ವಾಧೀನಕ್ಕೆ ಸಿದ್ಧತೆ ನಡೆದಿದೆ. ಕೃಷಿ ಭೂಮಿಯನ್ನು ಉಳಿಸಬೇಕೆಂದು ಸತತವಾಗಿ ಹೋರಾಡಿದ ರೈತರ ಆಶಯದಂತೆ ಕೃಷಿ ಭೂಮಿ ಎನ್ನುವ ಕಾರಣಕ್ಕೆ ಎಂಎಸ್‌ಇಝೆಡ್‌ನ ಭೂಸ್ವಾಧೀನ ಪ್ರಕ್ರಿಯೆಯಿಂದ ಕರ್ನಾಟಕ ಸರಕಾರವು ಡಿನೋಟಿಫೈ ಮಾಡಿದ್ದ ಭೂಮಿಯನ್ನು ಎಸ್‌ಇಝೆಡ್ ಪಾಲುದಾರ ಸಂಸ್ಥೆಯಾದ ಕೆಐಎಡಿಬಿಯು ಎಂಆರ್‌ಪಿಎಲ್ ಪರವಾಗಿ ಸ್ವಾಧೀನಪಡಿಸುತ್ತಿದೆ. ಈ ಬಗ್ಗೆ ಕೃಷಿ ಭೂಮಿ ಸಂರಕ್ಷಣಾ ಸಮಿತಿ ಕಳೆದ ನಾಲ್ಕು ವರ್ಷಗಳಿಂದ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. 2018ರ ಮಾರ್ಚ್ 13ರಂದು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರು ಈ ಬಗ್ಗೆ ತನಿಖೆ ನಡೆಸುವುದಾಗಿ ಆಶ್ವಾಸನೆ ನೀಡಿದ್ದರು. ಬಳಿಕ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿತ್ತು. ಜೂನ್ 27ರಂದು ದ.ಕ. ಜಿಲ್ಲಾಧಿಕಾರಿಗೆ, ಎಂಆರ್‌ಪಿಎಲ್‌ನ ಯೋಜನೆ ವಿಸ್ತರಣೆಗೆ ನಡೆದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆಗೆ ಪೂರಕವಾಗುವ ದಾಖಲೆಗಳನ್ನು ನೀಡಿದ್ದೆವು. ಆದರೆ ತನಿಖೆ ಪ್ರಕ್ರಿಯೆಗಳು ನಡೆದಿಲ್ಲ. ಪೆರ್ಮುದೆ ಗ್ರಾಪಂ ವತಿಯಿಂದ ನಡೆದ ಕುತ್ತೆತ್ತೂರು, ಪೆರ್ಮುದೆ ಗ್ರಾಮಸಭೆಯಲ್ಲಿ ಕೂಡಾ ಈ ಬಗ್ಗೆ ಚರ್ಚೆ ನಡೆದಿತ್ತು. ಜುಲೈ 31ರಂದು ಮುಖ್ಯಮಂತ್ರಿಯನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದು, ಅವರು ಕೂಡಾ ತನಿಖೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಆದೇಶಿಸಿದ್ದರು. ಇದಕ್ಕೆ ಪೂರಕವಾಗಿ ಮತ್ತೆ ಉಸ್ತುವಾರಿ ಸಚಿವರು ಆಗಸ್ಟ್ 3ರಂದು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಮೂಲಕ ತಿಳಿಸಿದ್ದರು. ಆದರೆ ಆದೇಶ ಪಾಲನೆಯಾಗಿಲ್ಲ. ಯಾರ ಒತ್ತಡದಿಂದಾಗಿ ಅಧಿಕಾರಿಗಳಿಗೆ ಆದೇಶ ಪಾಲನೆಗೆ ಸೂಚಿಸಲಾಗುತ್ತಿಲ್ಲ ಎಂಬುದನ್ನು ಸಚಿವರು ಸ್ಪಷ್ಟಪಡಿಸಬೇಕು. ಅನ್ಯಾಯಕ್ಕೆ ಒಳಗಾದ ರೈತರ ಪರ ನಿಲ್ಲಲು ಆಗದಂತಹ ಪರಿಸ್ಥಿತಿ ಏನು ಎಂಬುದನ್ನು ಅವರು ಸಾರ್ವಜನಿಕವಾಗಿ ತಿಳಿಸಬೇಕು ಎಂದು ಸಮಿತಿಯ ಅಧ್ಯಕ್ಷ ಮಧುಕರ ಅಮೀನ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಹೇಮಲತಾ ಎಸ್. ಭಟ್, ಸಂಯೋಜಕರಾದ ವಿದ್ಯಾ ದಿನಕರ್ ಉಪಸ್ಥಿತರಿದ್ದರು.


ನಮ್ಮ ಕೃಷಿ ಭೂಮಿ ಉಳಿಸಿಕೊಡಿ: ಮುಖ್ಯಮಂತ್ರಿಗೆ ಮನವಿ
ರೈತ ಪರ ಎನಿಸಿಕೊಂಡಿರುವ ರಾಜ್ಯ ಸರಕಾರ ಮುಖ್ಯಮಂತ್ರಿಗೆ ನಮ್ಮದೊಂದು ಕಳಕಳಿಯ ಮನವಿ. ನಮ್ಮ ಕೃಷಿ ಸಾಲಮನ್ನಾ ಮಾಡುವ ಅಗತ್ಯವಿಲ್ಲ. ಬದಲಿಗೆ ನಮ್ಮ ಕೃಷಿ ಭೂಮಿ ಉಳಿಸಿದರೆ ಸಾಕು. ಸೆಪ್ಟಂಬರ್ 8ರಂದು ಜಿಲ್ಲೆಗೆ ಭೇಟಿ ನೀಡುವ ವೇಳೆ ಕುತ್ತೆತ್ತೂರು, ಪೆರ್ಮುದೆಗೂ ಬಂದು ಫಲವತ್ತಾದ ಕೃಷಿ ಭೂಮಿಯನ್ನು ನೋಡಿ ರೈತನ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿ. ಭೂಸ್ವಾಧೀನತೆ ಹೆಸರಿನಲ್ಲಿ ಕೆಐಎಡಿಬಿಯಿಂದ ಆಗಿರುವ ವಂಚನೆಯನ್ನು ರೈತರಿಂದಲೇ ಕೇಳಿ ಎಂಬುದು ನಮ್ಮ ಆಗ್ರಹ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ರವಿಕಿರಣ್ ಪುಚಣ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News