“ಉಮರ್ ಖಾಲಿದ್ ಮೇಲೆ ದಾಳಿ ನಡೆಸಿ ಸ್ವಾತಂತ್ರ್ಯದ ಉಡುಗೊರೆ ನೀಡಬಯಸಿದ್ದೆವು”

Update: 2018-08-16 11:03 GMT

ಹೊಸದಿಲ್ಲಿ, ಆ.16: ಜೆಎನ್‍ಯು ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ತಾವು ದಾಳಿ ನಡೆಸಿದ್ದಾಗಿ ಹೇಳಿಕೊಂಡಿರುವ ಇಬ್ಬರು ಯುವಕರನ್ನು ಪತ್ತೆ ಹಚ್ಚಲು ದಿಲ್ಲಿ ಪೊಲೀಸ್ ವಿಶೇಷ ಸೆಲ್ ಬಲೆ ಬೀಸಿದೆ.

ವಾಟ್ಸ್ಯಾಪ್ ನಲ್ಲಿ ಹರಿದಾಡುತ್ತಿರುವ ನಾಲ್ಕು ನಿಮಿಷಗಳ ಅವಧಿಯ ವೀಡಿಯೋದಲ್ಲಿ  ಇಬ್ಬರು ಯುವಕರು, “ಖಾಲಿದ್ ಮೇಲೆ ದಾಳಿ ನಡೆಸಿ ನಾವು ಜನರಿಗೆ ಸ್ವಾತಂತ್ರ್ಯ ದಿನದ ಉಡುಗೊರೆ ನೀಡ ಬಯಸಿದ್ದೆವು, ನಾವು ಸಿಖ್ ಕ್ರಾಂತಿವಾದಿ ಕರ್ತಾರ್ ಸಿಂಗ್ ಸರಭ ಅವರ ನಿವಾಸದಲ್ಲಿ ಆಗಸ್ಟ್ 17ರಂದ ಶರಣಾಗುವೆವು'' ಎಂದು ಹೇಳಿಕೊಂಡಿದ್ದಾರೆ. ಅವರಲ್ಲೊಬ್ಬನ ಕೈಯ್ಯಲ್ಲಿ ಭಾರತದ ಧ್ವಜವೂ ಇದೆ.

ತಮ್ಮನ್ನು ಸರ್ವೇಶ್ ಶಾಹಪುರ್ ಹಾಗೂ ನವೀನ್ ದಲಾಲ್ ಎಂದು ಪರಿಚಯಿಸಿರುವ ಈ ಇಬ್ಬರು ಈ ದಾಳಿಯ ಘಟನೆ ಸಂಬಂಧ ಇತರರಿಗೆ ಕಿರುಕುಳ ನೀಡದಂತೆ ಪೊಲೀಸರನ್ನು ವಿನಂತಿಸಿದ್ದಾರೆ. ಅವರಿಬ್ಬರು ಹೇಳಿದ್ದು ನಿಜವೆಂದಾದರೆ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರಲ್ಲದೆ ಅವರನ್ನು ಪತ್ತೆ ಹಚ್ಚಲು ಪಂಜಾಬ್, ಹರ್ಯಾಣ ಪೊಲೀಸರ ಸಹಕಾರವನ್ನೂ ಕೋರುವುದಾಗಿ ತಿಳಿಸಿದ್ದಾರೆ.

ಈ ವಾಟ್ಸ್ಯಾಪ್ ವೀಡಿಯೊವನ್ನು ಹರ್ಯಾಣ ಅಥವಾ ಪಂಜಾಬ್ ರಾಜ್ಯದಲ್ಲಿ ಚಿತ್ರೀಕರಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News