ಪ್ಲೇ ಸ್ಟೋರ್ ನಲ್ಲಿ ಕಾಣಿಸಿಕೊಂಡು ಮತ್ತೆ ಮಾಯವಾದ ಪತಂಜಲಿ ‘ಕಿಂಭೋ’!

Update: 2018-08-16 16:13 GMT

ಹೊಸದಿಲ್ಲಿ,ಆ.16: ಪತಂಜಲಿಯ ನವೀಕೃತ ಸ್ವದೇಶಿ ಚಾಟ್ ಆ್ಯಪ್ ಆ.27ರಂದು ಅಧಿಕೃತ ಬಿಡುಗಡೆಯ ಮುನ್ನ ಬಳಕೆದಾರರ ಟ್ರಯಲ್‌ಗಾಗಿ ಬುಧವಾರ ಮತ್ತೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪ್ರತ್ಯಕ್ಷಗೊಂಡಿದ್ದು,5000ಕ್ಕೂ ಅಧಿಕ ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆದರೆ ಪ್ರೊಫೈಲ್ ಚಿತ್ರದ ಅಳವಡಿಕೆಯಲ್ಲಿ ಸಮಸ್ಯೆ ಮತ್ತು ಕೆಟ್ಟ ಯೂಸರ್ ಇಂಟರ್‌ಫೇಸ್(ಯುಐ) ಸೇರಿದಂತೆ ಬಳಕೆದಾರರು ವ್ಯಾಪಕವಾಗಿ ದೂರುತ್ತಿದ್ದಾರೆ.

ಇದೇನು ತಮಾಷೆಯಾ? ಇಷ್ಟೊಂದು ಕೆಟ್ಟ ಯುಐನ್ನು ಎಂದೂ ನೋಡಿಯೇ ಇಲ್ಲ ಎಂದು ಹೆಚ್ಚಿನ ಬಳಕೆದಾರರು ದೂರಿಕೊಂಡಿದ್ದಾರೆ. ನಂತರ ಈ ಆ್ಯಪ್ ಪ್ಲೇ ಸ್ಟೋರ್ ನಿಂದ ಮಾಯವಾಗಿದೆ.

 ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡ ನಂತರ ಫೋಟೊ,ಮೀಡಿಯಾ ಮತ್ತು ಫೈಲ್‌ಗಳು ಸೇರಿದಂತೆ ವಿವಿಧ ಮಾಹಿತಿಗಳನ್ನು ಪಡೆದುಕೊಳ್ಳಲು ಎಂಟು ಹಂತಗಳಲ್ಲಿ ಅನುಮತಿಗಳನ್ನು ಅದು ಕೋರುತ್ತಿದೆ.

ಫೋನ್ ನಂಬರ್‌ನಂತಹ ಬಳಕೆದಾರರ ಮಾಹಿತಿಗಳನ್ನು ಥರ್ಡ್ ಪಾರ್ಟಿ ಕಂಪನಿಗಳ ವಾಣಿಜ್ಯ ಬಳಕೆಗಳಿಗಾಗಿ ಮಾರಾಟ ಮಾಡುವುದಿಲ್ಲ ಎಂದು ಆ್ಯಪ್‌ನ ಖಾಸಗಿತನ ನೀತಿಯು ಹೇಳುತ್ತಿದೆಯಾದರೂ,ಕಿಂಭೋ ಸೇವೆಯನ್ನು ನೀಡಲು,ಉತ್ತಮಗೊಳಿಸಲು ಮತ್ತು ಕಾಯ್ದುಕೊಳ್ಳಲು ಅಗತ್ಯವಾದರೆ ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರೊಂದಿಗೆ ತಾನು ಈ ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂದೂ ತಿಳಿಸಿದೆ.

ಕಳೆದ ಮೇ ತಿಂಗಳಲ್ಲಿ ಬಿಡುಗಡೆಗೊಂಡಿದ್ದ ಈ ಆ್ಯಪ್‌ನ್ನು ಅದರ ಕಳಪೆ ಸುರಕ್ಷತಾ ವ್ಯವಸ್ಥೆ ಮತ್ತು ಕಾರ್ಯದಿಂದಾಗಿ ಅವಸರವಸರವಾಗಿ ಹಿಂದೆಗೆದುಕೊಳ್ಳಲಾಗಿತ್ತು.

ಆ.27ರಂದು ಬಿಡುಗಡೆಗೆ ಮುನ್ನ ಆ್ಯಪ್‌ನಲ್ಲಿಯ ದೋಷಗಳನ್ನು ನಿವಾರಿಸಲಾಗುವುದು ಎಂದು ಪತಂಜಲಿ ಆಯುರ್ವೇದ್‌ನ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಗುರುವಾರ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News