ಗ್ರೀನ್ ಕಾರ್ಡ್ ಮಸೂದೆಯಿಂದ ಭಾರತಕ್ಕೆ ಅಗಾಧ ಲಾಭ: ಇರಾನ್ ವಿರೋಧ

Update: 2018-08-16 15:30 GMT

  ವಾಶಿಂಗ್ಟನ್, ಆ. 16: ಅಮೆರಿಕದಲ್ಲಿ ಖಾಯಂ ಆಗಿ ವಾಸಿಸಲು ಅವಕಾಶ ನೀಡುವ ಗ್ರೀನ್‌ಕಾರ್ಡ್‌ನ ವಿತರಣೆಯಲ್ಲಿ ದೇಶವಾರು ಮಿತಿಯನ್ನು ತೆಗೆದುಹಾಕುವ ಮಸೂದೆಯೊಂದಕ್ಕೆ ಅಮೆರಿಕದ ಕಾಂಗ್ರೆಸ್ ಸಮಿತಿಯೊಂದು ಜುಲೈಯಲ್ಲಿ ಅನುಮೋದನೆ ನೀಡಿದ ಬೆನ್ನಿಗೇ ವಿರೋಧ ವ್ಯಕ್ತವಾಗಿದೆ.

ಅಮೆರಿಕದಲ್ಲಿ ಖಾಯಂ ಆಗಿ ವಾಸಿಸಲು ಬಯಸುತ್ತಿರುವ ಇರಾನಿಯನ್ನರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

3 ಲಕ್ಷಕ್ಕೂ ಅಧಿಕ ನನೆಗುದಿಗೆ ಬಿದ್ದಿರುವ ಭಾರತೀಯರ ಗ್ರೀನ್‌ಕಾರ್ಡ್ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಇದು ತ್ವರಿತಗೊಳಿಸಲಿದೆ.

ದೇಶವಾರು ಮಿತಿಯನ್ನು ತೆಗೆದುಹಾಕಿದರೆ ಭಾರತ ಮತ್ತು ಚೀನಾ ಮುಂತಾದ ದೊಡ್ಡ ದೇಶಗಳ ಪ್ರಜೆಗಳಿಗೆ ಲಾಭವಾಗುತ್ತದೆ ಹಾಗೂ ಅದಕ್ಕೆ ಬೆಲೆ ತೆರುವವರು ಇರಾನ್ ಮುಂತಾದ ಸಣ್ಣ ದೇಶಗಳ ಪ್ರಜೆಗಳು ಎಂದು ನ್ಯಾಶನಲ್ ಇರಾನಿಯನ್ ಅಮೆರಿಕನ್ ಕೌನ್ಸಿಲ್ ಹೇಳಿದೆ.

ಇಂಥ ವಾದಗಳನ್ನು ಬಹಿರಂಗವಾಗಿ ಮಂಡಿಸಲಾಗುತ್ತಿದೆ. ಅದೇ ವೇಳೆ, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಭಾರತ ವಿರೋಧಿ ಗುಪ್ತ ಅಭಿಯಾನವನ್ನು ನಡೆಸಿಕೊಂಡು ಬರಲಾಗುತ್ತಿದೆ. ‘ಅಮೆರಿಕನ್ನರ ಉದ್ಯೋಗಗಳು ಮತ್ತು ದೇಶವನ್ನು ಕಿತ್ತುಕೊಳ್ಳಲು ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಹಾಗೂ ಅಮೆರಿಕವನ್ನು ಭಾರತೀಕರಣಗೊಳಿಸುತ್ತಾರೆ’ ಮುಂತಾದ ವಿತಂಡವಾದಗಳನ್ನು ಹರಿಯಬಿಡಲಾಗುತ್ತಿದೆ.

ಇರಾನಿಯನ್ನರು ಮಸೂದೆಯನ್ನು ವಿರೋಧಿಸುವುದಕ್ಕಾಗಿ ತಮ್ಮನ್ನು ತಾವು ವಲಸೆ ವಿರೋಧಿ ಅಮೆರಿಕನ್ನರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ‘ಡೇಲಿ ಕ್ಯಾಲಿಪರ್’ ಸೋಮವಾರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News