ಮಾಜಿ ಸಿಐಎ ಮುಖ್ಯಸ್ಥನ ವಿಶೇಷಾಧಿಕಾರ ಹಿಂದಕ್ಕೆ ಪಡೆದ ಟ್ರಂಪ್

Update: 2018-08-16 15:33 GMT

ವಾಶಿಂಗ್ಟನ್, ಆ. 16: ತನ್ನ ಕಟು ಟೀಕಾಕಾರರಲ್ಲಿ ಒಬ್ಬರಾಗಿರುವ ಗುಪ್ತಚರ ಸಂಸ್ಥೆ ಸೆಂಟ್ರಲ್ ಇಂಟಲಿಜನ್ಸ್ ಏಜನ್ಸಿ (ಸಿಐಎ)ಯ ಮಾಜಿ ನಿರ್ದೇಶಕ ಜಾನ್ ಬ್ರೆನನ್‌ಗೆ ನೀಡಲಾಗಿದ್ದ ಭದ್ರತಾ ಅನುಮೋದನೆ (ಸೆಕ್ಯುರಿಟಿ ಕ್ಲಿಯರೆನ್ಸ್)ಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಅದೇ ವೇಳೆ, ಹಿಂದಿನ ಸರಕಾರಗಳ ಇತರ ಟೀಕಾಕಾರರೂ ಇಂಥದೇ ಕ್ರಮವನ್ನು ಎದುರಿಸಬೇಕಾಗಿಬರಬಹುದು ಎಂಬ ಸೂಚನೆಯನ್ನೂ ನೀಡಿದ್ದಾರೆ.

‘‘ಕಾರ್ಯಾಂಗದ ಮುಖ್ಯಸ್ಥನಾಗಿ ಹಾಗೂ ಸೇನೆಯ ಮುಖ್ಯಸ್ಥನಾಗಿ, ದೇಶದ ಗುಪ್ತ ಮಾಹಿತಿಯನ್ನು ರಕ್ಷಿಸುವ ಸಾಂವಿಧಾನಿಕ ಹೊಣೆಗಾರಿಕೆ ನನ್ನ ಮೇಲಿದೆ. ಗುಪ್ತ ಮಾಹಿತಿಯನ್ನು ಯಾರು ಪಡೆಯಬೇಕು ಅಥವಾ ಪಡೆಯಬಾರದು ಎನ್ನುವುದನ್ನೂ ನಾನು ನಿರ್ಧರಿಸಬೇಕು. ಸಿಐಎಯ ಮಾಜಿ ನಿರ್ದೇಶಕ ಜಾನ್ ಬ್ರೆನನ್‌ಗೆ ನೀಡಲಾಗಿದ್ದ ಭದ್ರತಾ ಅನುಮೋದನೆಯನ್ನು ಹಿಂದಕ್ಕೆ ಪಡೆಯಲು ನಾನು ನಿರ್ಧರಿಸಿದ್ದೇನೆ’’ ಎಂದು ಹೇಳಿಕೆಯೊಂದರಲ್ಲಿ ಟ್ರಂಪ್ ಹೇಳಿದ್ದಾರೆ.

ಈ ಹೇಳಿಕೆಯನ್ನು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಓದಿ ಹೇಳಿದರು.

‘‘ಬ್ರೆನನ್ ವಿಕ್ಷಿಪ್ತ ಗುಣ ಮತ್ತು ವರ್ತನೆಯನ್ನು ಪ್ರದರ್ಶಿಸಿದ್ದಾರೆ ಹಾಗೂ ಸಿಬ್ಬಂದಿಯ ಕಂಪ್ಯೂಟರ್‌ಗಳನ್ನು ನೋಡುವುದಕ್ಕೆ ಸಂಬಂಧಿಸಿ ಕಾಂಗ್ರೆಸ್‌ಗೆ ತಪ್ಪು ಮಾಹಿತಿ ನೀಡಿದ್ದಾರೆ. ಅವರು ಈ ಸರಕಾರದ ಬಗ್ಗೆ ಇಂಟರ್‌ನೆಟ್ ಮತ್ತು ಟಿವಿ ಚಾನೆಲ್‌ಗಳಲ್ಲಿ ಹಲವಾರು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ’’ ಎಂದು ಟ್ರಂಪ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News