ಉತ್ತರ ಪ್ರದೇಶದ ಹೋರಾಟದ ಧ್ವನಿ 23ರ ಯುವತಿ ಪೂಜಾ
ಲಕ್ನೋ, ಆ.16: ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಲಕ್ನೋದಲ್ಲಿ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವ ಕೆಲವೇ ಗಂಟೆಗಳ ಮೊದಲು ಪೊಲೀಸರು 23 ವರ್ಷದ ಹೋರಾಟಗಾರ್ತಿ ಪೂಜಾ ಶುಕ್ಲಾರನ್ನು ಸುತ್ತುವರಿದರು.
ನಂತರ ಆಕೆಯನ್ನು ಪೊಲೀಸ್ ಜೀಪಿಗೆ ಎಳೆದೊಯ್ದು, ಮೊಬೈಲ್ ಫೋನನ್ನು ಸೆಳೆದರು. ಐದು ಗಂಟೆಗಳ ಕಾಲ ಆಕೆಯನ್ನು ಸುತ್ತಾಡಿಸಿದರು. ಆಕೆ ಅನಾರೋಗ್ಯದಿಂದಿರುವಂತೆ ನಾಟಕವಾಡಿದ ನಂತರ ಬಿಡುಗಡೆಗೊಳಿಸಿದ್ದರು. ಆಕೆ ತನ್ನ ಹೆತ್ತವರೊಡನೆ ವಾಸಿಸುವ ಸರೋಜಿನಿ ನಗರ ನಿವಾಸಕ್ಕೂ ಪೊಲೀಸರು ದಾಳಿ ನಡೆಸಿದ್ದರು. ಇದರ ಹಿಂದೆ ಒಂದು ಕಾರಣವಿದೆ. ಸಮಾಜವಾದಿ ಪಕ್ಷದ ಯುವ ಘಟಕದಲ್ಲಿರುವ ಪೂಜಾ ಉತ್ತರ ಪ್ರದೇಶದಲ್ಲಿ ಅಸಮ್ಮತಿಯ ದ್ಯೋತಕವಾಗಿದ್ದಾಳೆ. ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದು ಇದೇ ಮೊದಲ ಬಾರಿಯಲ್ಲ.
ಕಳೆದ ವರ್ಷದ ಜೂನ್ ತಿಂಗಳಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಆಕೆ ಕಲಿಯುತ್ತಿದ್ದ ಲಕ್ನೋ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಶಿವಾಜಿ ಪ್ರತಿಮೆ ಅನಾವರಣಗೊಳಿಸಲು ಆಗಮಿಸಿದ್ದ ಸಂದರ್ಭ ಇತರ ವಿದ್ಯಾರ್ಥಿಗಳ ಜತೆಗೂಡಿ ಕಪ್ಪು ಬಾವುಟ ಪ್ರದರ್ಶಿಸಿದ್ದಳು. ಈ ತಪ್ಪಿಗೆ ಆಕೆ 26 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸುವಂತಾಗಿತ್ತು.
ವಿವಿಯಲ್ಲಿ ಹಣಕಾಸಿನ ಕೊರತೆಯ ನೆಪವೊಡ್ಡಿ ವಿದ್ಯಾರ್ಥಿಗಳ ಶುಲ್ಕ ಏರಿಸಲಾಗಿದ್ದರೂ ಈ ಪ್ರತಿಮೆಯನ್ನು ಮುಂಬೈಯಿಂದ ತರಿಸಲು ಸಂಸ್ಥೆ ಬರೋಬ್ಬರಿ 40 ಲಕ್ಷ ರೂ. ವೆಚ್ಚ ಮಾಡಿದ್ದನ್ನು ವಿರೋಧಿಸಿ ವಿದ್ಯಾರ್ಥಿಗಳು ಈ ಪ್ರತಿಭಟನೆ ನಡೆಸಿದ್ದರು. ಪೂಜಾ ಮತ್ತಿತರ ವಿದ್ಯಾರ್ಥಿಗಳು ಆ ದಿನ ಕಾಲೇಜಿನ ಆವರಣದ ಹೊರಗೆ ನಿಂತುಕೊಂಡು ಪರಸ್ಪರ ಮಾತನಾಡುವ ನಾಟಕ ನಡೆಸಿ ಮುಖ್ಯಮಂತ್ರಿ ಆಗಮಿಸುತ್ತಿದ್ದಂತೆಯೇ ತಮ್ಮ ಪುಸ್ತಕಗಳೆಡೆಗಳಲ್ಲಿ ಹಾಗೂ ಟಿಫಿನ್ ಬಾಕ್ಸುಗಳಲ್ಲಿ ಅಡಗಿಸಿಡಲಾಗಿದ್ದ ಕಪ್ಪು ಬಾವುಟವನ್ನು ಹೊರಗೆಳೆದು ಪ್ರತಿಭಟಿಸಿದ್ದರು.
ಆಕೆಯ ಬಂಧನದ ನಂತರ ಆಕೆಯ ಕುಟುಂಬ ಭಯದಲ್ಲಿಯೇ ಜೀವಿಸುತ್ತಿತ್ತು. ಆಕೆಯ ತಂದೆ ರಾಕೇಶ್ ಒಬ್ಬ ಸಣ್ಣ ಮಟ್ಟಿನ ರಿಯಲ್ ಎಸ್ಟೇಟ್ ಏಜಂಟರಾಗಿದ್ದು, ಆಕೆ ತಂದೆ ತಾಯಿ ಹಾಗೂ ಇಬ್ಬರು ಸೋದರಿಯರ ಜತೆ ಒಂದು ಕೊಠಡಿಯ ಮನೆಯಲ್ಲಿ ವಾಸವಾಗಿದ್ದಾಳೆ.
ತಂದೆಗೆ ಆಕೆಯ ಈ ಹೋರಾಟಗಳು ಇಷ್ಟವಾಗಿಲ್ಲ. ತಂದೆ ಆಯ್ಕೆ ಮಾಡಿದ್ದ ಕಾಲೇಜು ಆಕೆಗೆ ಹಿಡಿಸಿಲ್ಲವೆಂದು ಅಲ್ಲಿಗೆ ಹೋಗಲು ನಿರಾಕರಿಸಿದ ಘಟನೆಯೂ ನಡೆದಿತ್ತು. ಲಕ್ನೋ ವಿವಿಯಲ್ಲಿ ಪ್ರಥಮ ವರ್ಷದಲ್ಲಿರುವಾಗಲೇ ತನ್ನ ಸ್ನೇಹಿತೆಗೆ ಕಿರುಕುಳ ನೀಡಿದ ವಿದ್ಯಾರ್ಥಿಯನ್ನು ಕ್ಷಮೆಯಾಚಿಸುವಂತೆ ಪೂಜಾ ಮಾಡಿದ್ದಳು. ಇದರ ನಂತರ ಆಕೆಗೆ ಸಹಿಸಲಾರದ ಕಿರುಕುಳ ಕೆಲವರು ನೀಡಿದ್ದರಿಂದ ಆಕೆ ಎರಡು ತಿಂಗಳು ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದ್ದಳು.
ಆರಂಭದಲ್ಲಿ ಸಿಪಿಐ(ಎಂಎಲ್) ವಿದ್ಯಾರ್ಥಿ ಘಟಕ - ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್ ಸೇರಿದ್ದ ಆಕೆ ಕಳೆದ ವರ್ಷ ತನ್ನನ್ನು ಬಂಧನದಿಂದ ಬಿಡುಗಡೆಗೊಳಿಸಲು ಶ್ರಮಿಸಿದ ಸಮಾಜವಾದಿ ಪಕ್ಷವನ್ನು ಸೇರಿದ್ದಳು. ಆದರೆ ಸದ್ಯೋಭವಿಷ್ಯದಲ್ಲಿ ಚುನಾವಣೆ ಸ್ಪರ್ಧಿಸುವ ಇಂಗಿತ ಆಕೆಗಿಲ್ಲ. ದಿಲ್ಲಿಯಲ್ಲಿ ಮಹಿಳಾ ಕಾರ್ಯಕರ್ತೆಯಾಗಿರುವುದಕ್ಕೂ ಉತ್ತರ ಪ್ರದೇಶದಲ್ಲಿ ರಾಜಕೀಯವಾಗಿ ಸಕ್ರಿಯವಾಗಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎನುತ್ತಾರೆ ಪೂಜಾ.