ಯುವ ಸಂಸದ ವಾಜಪೇಯಿಯ ಪ್ರತಿಭೆಗೆ ನೀರೆರೆದು ಪೋಷಿಸಿದ್ದ ಪ್ರಧಾನಿ ನೆಹರೂ !

Update: 2018-08-16 16:50 GMT

ವಾಜಪೇಯಿ ಅತ್ಯಂತ ಶ್ರೇಷ್ಠ ಸಂಸದೀಯ ಪಟುವಾಗಿ ಇಂದಿಗೂ ಎಲ್ಲ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಅವರು ತಮ್ಮ ಮಾತುಗಾರಿಕೆಯಿಂದ ಹೇಗೆ ಇಡೀ ಸದನವನ್ನು ತನ್ನೆಡೆಗೆ ಸೆಳೆದಿಡಬಲ್ಲರು ಎಂಬುದಕ್ಕೆ ನೂರಾರು ಉದಾಹರಣೆಗಳಿವೆ. ಇಂತಹ ಅಸಾಮಾನ್ಯ ಸಂಸದೀಯ ಪಟುವಿಗೆ ತನ್ನ ಮೊದಲ ಅವಧಿಯಲ್ಲೇ ದೇಶದ ಪ್ರಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರಿಂದ ಪ್ರೋತ್ಸಾಹ, ಬೆಂಬಲ ಸಿಕ್ಕಿದ ವಿಷಯವನ್ನು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ನೆನಪಿಸಿಕೊಂಡಿದ್ದಾರೆ. 

1957ರಲ್ಲಿ ವಾಜಪೇಯಿ  ಮೊದಲ ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದರು. ಆಗ ನೆಹರೂ ಪ್ರಧಾನಿ. ಕೆಲವೇ ತಿಂಗಳುಗಳಲ್ಲಿ ಇನ್ನೂ 30ರ ಆಸುಪಾಸಿನಲ್ಲಿದ್ದ ಯುವಕ ವಾಜಪೇಯಿಯ ಮಾತು, ವಿಷಯ ಮಂಡನೆಯ ರೀತಿ ನೋಡಿದ ನೆಹರೂ ಅವರು ತಮ್ಮ ಆಪ್ತರಲ್ಲಿ " ಈತನಲ್ಲಿ ಭವಿಷ್ಯದ ಪ್ರಧಾನಿ ಆಗುವ ಸಾಮರ್ಥ್ಯವಿದೆ " ಎಂದು ಹೇಳಿದ್ದರು. ಮಾತ್ರವಲ್ಲ ಸಂದರ್ಭ ಸಿಕ್ಕಾಗಲೆಲ್ಲಾ ವಾಜಪೇಯಿಯನ್ನು ಪ್ರೋತ್ಸಾಹಿಸುತ್ತಿದ್ದರು. 

1958ರಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದ, ಬಳಿಕ ದೇಶದ ವಿದೇಶಾಂಗ ಕಾರ್ಯದರ್ಶಿಯಾಗಿ ನಿವೃತ್ತರಾದ ಎಂ . ರಸ್ ಗೋತ್ರ ಅವರಿಗೆ ಪ್ರಧಾನ ಮಂತ್ರಿ ನೆಹರೂ ಅವರ ಕಚೇರಿಯಿಂದ ಸಂದೇಶವೊಂದು ಬಂತು. ಅದರಲ್ಲಿ ಇದ್ದಿದ್ದು ಇಷ್ಟು. " ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಭಾರತದ ನಿಯೋಗದಲ್ಲಿ ಪ್ರಧಾನಿ ಅವರು ಪ್ರಥಮ ಬಾರಿಯ ಸಂಸದರೊಬ್ಬರನ್ನು ಸೇರಿಸಿದ್ದಾರೆ. ಪ್ರಧಾನಿಗೆ ಆ ಸಂಸದರ ಮೇಲೆ ಭಾರೀ ಭರವಸೆ ಇದ್ದು ಆ ಸಂಸದರ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರನ್ನು ಆದಷ್ಟು ಹೆಚ್ಚು ವಿದೇಶಿ ನಾಯಕರುಗಳಿಗೆ ಪರಿಚಯಿಸಬೇಕು". ವಿಪಕ್ಷದಲ್ಲಿದ್ದ , ತನಗಿಂತ ಅರ್ಧ ವಯಸ್ಸಿನ ಯುವ ಸಂಸದನೊಬ್ಬನಲ್ಲಿ ಪ್ರತಿಭೆಯನ್ನು ಗುರುತಿಸಿ ಅದನ್ನು ದೇಶಕ್ಕಾಗಿ ಪೋಷಿಸುವ ನೆಹರೂ ಅವರ ಕಾಳಜಿ ಅಲ್ಲಿ ಎದ್ದು ಕಾಣುತ್ತಿತ್ತು. 

1962 ರಲ್ಲಿ ಚೀನಾದಿಂದ ಅತಿಕ್ರಮಣ ನಡೆಯುತ್ತಿದ್ದಾಗ ಜನಸಂಘದ ( ವಾಜಪೇಯಿ ಸಹಿತ ) ನಾಲ್ವರು ಸಂಸದರ ನಿಯೋಗವೊಂದು ಪ್ರಧಾನಿ ನೆಹರೂ ಅವರನ್ನು ಭೇಟಿ ಮಾಡಿ ತಕ್ಷಣ ಸಂಸತ್ತಿನ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿತು. ನೆಹರೂ ತಕ್ಷಣ ಒಪ್ಪಿದರು!. ಅಧಿವೇಶನದಲ್ಲಿ ನೆಹರೂ ವಿರುದ್ಧ ವಾಜಪೇಯಿ ತೀವ್ರ ವಾಗ್ದಾಳಿ ನಡೆಸಿದರು. ಅದನ್ನು ಸಮಾಧಾನದಿಂದ ಆಲಿಸಿದ ನೆಹರೂ ಬಳಿಕ ಅಷ್ಟೇ ಸಮಾಧಾನದಿಂದ ಅದಕ್ಕೆ ಉತ್ತರ ನೀಡಿದರು. ಆಗ ವಾಜಪೇಯಿಗೆ 36 ವರ್ಷ. ವಿಪಕ್ಷದ ಯುವ ಸಂಸದ. ನೆಹರೂ ದೇಶದ ಅತ್ಯಂತ ಹಿರಿಯ, ಖ್ಯಾತ ನಾಯಕ, ಪ್ರಧಾನಿ. ವಯಸ್ಸು ವಾಜಪೇಯಿಯ ಎರಡರಷ್ಟು. ಆದರೂ ಆ ನಾಯಕನನ್ನು ಒಪ್ಪಿಸಿ ಅಧಿವೇಶನ ಕರೆಯಿಸಿ ಅವರನ್ನೇ ಟೀಕಿಸುವ ವಾಜಪೇಯಿಯ ಸಾಮರ್ಥ್ಯ ಹಾಗು ಸುಲಭವಾಗಿ ತಿರಸ್ಕರಿಸಿ ಬಿಡಬಹುದಾಗಿದ್ದರೂ ಹಾಗೆ ಮಾಡದೆ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿದ ನೆಹರೂ ಅವರ ಧೀಮಂತಿಕೆ ಎರಡಕ್ಕೂ ಆ ಘಟನೆ ಸಾಕ್ಷಿಯಾಯಿತು ಎನ್ನುತ್ತಾರೆ ಮಣಿಶಂಕರ್ ಅಯ್ಯರ್.  

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ ಅವರಿಗೆ ಇದೇ ಘಟನೆಯನ್ನು ನೆನಪಿಸಿ  ರಾಜ್ಯಸಭೆಯ ಕಲಾಪ ಕರೆಯುವಂತೆ ( ಆಗ ಲೋಕಸಭೆ ವಿಸರ್ಜನೆ ಆಗಿತ್ತು) ಕಾಂಗ್ರೆಸ್ ನಲ್ಲಿದ್ದ ಮಣಿಶಂಕರ್ ಅಯ್ಯರ್ ವಿನಂತಿಸಿದಾಗ ವಾಜಪೇಯಿ ಅದಕ್ಕೆ ಒಪ್ಪಲೇ ಇಲ್ಲ !

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News