×
Ad

ರಾಹುಲ್ ಭದ್ರತಾ ವ್ಯವಸ್ಥೆಯಲ್ಲಿ ಲೋಪ: ಕೇಂದ್ರಕ್ಕೆ ನೋಟಿಸ್

Update: 2018-08-16 22:30 IST

ಚೆನ್ನೈ, ಆ.16: ಇತ್ತೀಚೆಗೆ ನಿಧನರಾದ ಡಿಎಂಕೆ ಮುಖಂಡ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಚೆನ್ನೈಯ ರಾಜಾಜಿ ಹಾಲ್‌ಗೆ ಆಗಮಿಸಿದ್ದ ಸಂದರ್ಭ ಭದ್ರತಾ ವ್ಯವಸ್ಥೆಯಲ್ಲಿ ಲೋಪವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ತಮಿಳುನಾಡು ಹಾಗೂ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ವಕೀಲ ಸೂರ್ಯಪ್ರಕಾಶ್ ಎಂಬವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್‌ನ ವಿಭಾಗೀಯ ಪೀಠವು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆ.14ಕ್ಕೆ ಮುಂದೂಡಿದೆ. ಆ.8ರಂದು ರಾಜಾಜಿ ಹಾಲ್‌ನಲ್ಲಿ ಇರಿಸಲಾಗಿದ್ದ ಕರುಣಾನಿಧಿಯವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಲು ರಾಹುಲ್ ಆಗಮಿಸಿದ್ದು,  ಆ ಸಂದರ್ಭ ಅಲ್ಲಿ ನೆರೆದಿದ್ದ ಭಾರೀ ಜನಸ್ತೋಮ ರಾಹುಲ್‌ರನ್ನು ಸುತ್ತುವರಿದಿತ್ತು. ಆಗ ರಾಹುಲ್‌ಗೆ ನೀಡಲಾಗಿದ್ದ ಎಸ್‌ಪಿಜಿ ಭದ್ರತಾ ವ್ಯವಸ್ಥೆ ಸಂಪೂರ್ಣ ವಿಫಲವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂದರ್ಭದ ವೀಡಿಯೊ ದೃಶ್ಯಾವಳಿಯನ್ನು ಅವರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅದರಲ್ಲಿ ರಾಹುಲ್ ಎದುರು ನಿಂತಿದ್ದ ಭದ್ರತಾ ಅಧಿಕಾರಿ ಹಾಗೂ ಸಭಾಂಗಣದ ಮೆಟ್ಟಿಲಿನಲ್ಲಿದ್ದ ಅಧಿಕಾರಿ ಸಭಾಂಗಣದತ್ತ ನುಗ್ಗಿ ಬರುತ್ತಿದ್ದ ಜನಸಮೂಹಕ್ಕೆ ಪಿಸ್ತೂಲ್ ತೋರಿಸಿ ಚದುರುವಂತೆ ಸೂಚಿಸುತ್ತಿರುವ ದೃಶ್ಯವಿದೆ. ಸಭಾಂಗಣಕ್ಕೆ ಗಣ್ಯ ವ್ಯಕ್ತಿಗಳು ಬರುತ್ತಿರುವುದನ್ನು ತಿಳಿದಿದ್ದರೂ ಅಲ್ಲಿ ಸಿಸಿ ಕ್ಯಾಮರಾದ ವ್ಯವಸ್ಥೆ ಹಾಗೂ ಲೋಹಶೋಧಕ ಯಂತ್ರಗಳ ವ್ಯವಸ್ಥೆ ಮಾಡದೆ ಭದ್ರತಾ ವ್ಯವಸ್ಥೆಯಲ್ಲಿ ಲೋಪ ಎಸಗಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅಲ್ಲದೆ ಮೃತ ನಾಯಕನಿಗೆ ಶ್ರದ್ದಾಂಜಲಿ ಸಲ್ಲಿಸಲು ಬಂದಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠೀಚಾರ್ಜ್ ನಡೆಸಿದಾಗ ಮೂವರು ಮೃತಪಟ್ಟಿದ್ದಾರೆ. ಮೃತರ ಕುಟುಂಬದವರಿಗೆ ತಲಾ 20 ಲಕ್ಷ ಪರಿಹಾರ ನೀಡುವಂತೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ===

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News