ಫಿಫಾ ರ‍್ಯಾಂಕಿಂಗ್: ವಿಶ್ವ ಚಾಂಪಿಯನ್ ಫ್ರಾನ್ಸ್ ನಂ.1

Update: 2018-08-16 18:01 GMT

ಝೂರಿಕ್, ಆ.16: ವಿಶ್ವ ಚಾಂಪಿಯನ್ ಫ್ರಾನ್ಸ್ ನಿರೀಕ್ಷೆಯಂತೆಯೇ ಗುರುವಾರ ಬಿಡುಗಡೆಯಾದ ಫಿಫಾ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದೆ. ಈ ಹಿಂದೆ ನಂ.1 ಸ್ಥಾನದಲ್ಲಿದ್ದ ಜರ್ಮನಿ ತಂಡ ರಶ್ಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಲ್ಲೇ ನಿರ್ಗಮಿಸಿದ ಕಾರಣ 15ನೇ ರ‍್ಯಾಂಕಿಗೆ ಕುಸಿದಿದೆ.

ಜು.15 ರಂದು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಕ್ರೊಯೇಶಿಯವನ್ನು 4-2 ಅಂತರದಿಂದ ಸೋಲಿಸಿದ ಬಳಿಕ ಮೊದಲ ಬಾರಿ ಫಿಫಾ ರ‍್ಯಾಂಕಿಂಗ್ ಪ್ರಕಟವಾಗಿದೆ.

 ಹೆಚ್ಚು ಟೀಕೆಗೆ ಕಾರಣವಾಗಿದ್ದ ಹಳೆ ಮಾದರಿಯ ರ‍್ಯಾಂಕಿಂಗ್‌ನ್ನು ಕೈ ಬಿಟ್ಟು ಹೊಸ ಮಾದರಿಯ ರ‍್ಯಾಂಕಿಂಗ್‌ನ್ನು ಈಗ ಪರಿಚಯಿಸಲಾಗಿದೆ.

ಫ್ರಾನ್ಸ್ ನಂತರ ಬೆಲ್ಜಿಯಂ ಎರಡನೇ ಸ್ಥಾನದಲ್ಲಿದೆ. ಬೆಲ್ಜಿಯಂ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದ ಬ್ರೆಝಿಲ್ ಮೂರನೇ ಸ್ಥಾನಕ್ಕೆ ಕುಸಿದಿದೆ. ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿ ಅಚ್ಚರಿ ಮೂಡಿಸಿದ್ದ ಕ್ರೊಯೇಶಿಯ 20 ಸ್ಥಾನ ಮೇಲಕ್ಕೇರಿ 4ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಕ್ವಾರ್ಟರ್ ಫೈನಲ್‌ಗೆ ತಲುಪಿದ್ದ ಉರುಗ್ವೆ 9 ಸ್ಥಾನ ಭಡ್ತಿ ಪಡೆದು 5ನೇ ಸ್ಥಾನದಲ್ಲೂ, ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಇಂಗ್ಲೆಂಡ್ ತಂಡ 12ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಕ್ರೊಯೇಶಿಯ ವಿರುದ್ಧ 0-3 ಹಾಗೂ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 3-4 ಅಂತರದಿಂದ ಸೋತಿದ್ದ ಅರ್ಜೆಂಟೀನ 11ನೇ ಸ್ಥಾನಕ್ಕೆ ಜಾರಿದೆ.

 ಈ ವರ್ಷದ ವಿಶ್ವಕಪ್‌ನ ಆತಿಥ್ಯವಹಿಸಿಕೊಂಡಿದ್ದ ರಶ್ಯ ಟೂರ್ನಿ ಆರಂಭಕ್ಕೆ ಮೊದಲು 71ನೇ ಸ್ಥಾನದಲ್ಲಿತ್ತು. ಕ್ವಾರ್ಟರ್ ಫೈನಲ್‌ಗೆ ತಲುಪಿ ಅಚ್ಚರಿ ಫಲಿತಾಂಶ ದಾಖಲಿಸಿದ್ದ ರಶ್ಯ 21 ಸ್ಥಾನ ಮೇಲಕ್ಕೇರಿದೆ.

ವಿಶ್ವಕಪ್ ಆರಂಭಕ್ಕೆ ಮೊದಲೇ ನೂತನ ರ‍್ಯಾಂಕಿಂಗ್ ಫಾರ್ಮುಲಾಕ್ಕೆ ಫಿಫಾ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News