ಮಂಗಳೂರು : 'ಅಜಾತಶತ್ರು'ವಿಗೆ ಜಿಲ್ಲಾ ಬಿಜೆಪಿಯಿಂದ ನುಡಿನಮನ

Update: 2018-08-16 18:49 GMT

ಮಂಗಳೂರು, ಆ.16: ಅಗಲಿದ ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗುರುವಾರ ರಾತ್ರಿ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನುಡಿನಮನ ಸಲ್ಲಿಸಲಾಯಿತು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮಾಜಿ ಶಾಸಕ ಎನ್.ಯೋಗೀಶ್ ಭಟ್, ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಸೇರಿದಂತೆ ಹಲವು ಮಂದಿ ಬಿಜೆಪಿ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ನುಡಿನಮನ ಸಲ್ಲಿಸಿದ ಸಂಸದ ನಳಿನ್‌ಕುಮಾರ್ ಕಟೀಲ್, ವಾಜಪೇಯಿ ನುಡಿದಂತೆ ನಡೆದ, ರಾಷ್ಟ್ರಮಾತೆಯ ಆರಾಧನೆಯೇ ತನ್ನ ಪ್ರಮುಖ ಕರ್ತವ್ಯವೆಂದು ತನ್ನ ಜೀವನವನ್ನು ರಾಷ್ಟ್ರಹಿತಕ್ಕೆ ಅರ್ಪಿಸಿಕೊಂಡ ಅಪೂರ್ವ ವ್ಯಕ್ತಿ. ರಾಜಕೀಯ ಕ್ಷೇತ್ರದಲ್ಲಿ ಹೇಗಿರಬೇಕು, ಹೇಗಿರಬಾರದು ಎಂಬುದಕ್ಕೆ ಅವರ ಬದುಕು ನಿದರ್ಶನವಾಗಿದೆ ಎಂದರು.

ಸಚ್ಛಾರಿತ್ರ್ಯದ ರಾಜಕಾರಣಿಯಾದ ವಾಜಪೇಯಿ ಜಗತ್ತಿನ ಎತ್ತರಕ್ಕೆ ಭಾರತವನ್ನು ಕೊಂಡೊಯ್ದವರು. ಗ್ರಾಮಗಳ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡವರು. ಸರ್ವ ಶಿಕ್ಷಾ ಅಭಿಯಾನದ ಮೂಲಕ ಪ್ರತಿಯೊಬ್ಬರೂ ಶಿಕ್ಷಿತರಾಗಬೇಕು ಎಂದು ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದವರು ಎಂದು ನಳಿನ್ ನುಡಿದರು.

ಪ್ರಧಾನಿಯಾಗಿ ದೇಶಕ್ಕೆ ಒಳ್ಳೆಯ ಆಡಳಿತ ನೀಡಿದ ವಾಜಪೇಯಿ ಅವರು ತನ್ನ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದು ಈ ನಿಟ್ಟಿನಲ್ಲಿ ಶ್ರಮಿಸಿದವರು. ಅವರು ಕೈಗೊಂಡ ನಿಲುವುಗಳು ಅಚಲವಾಗಿರುತ್ತಿದ್ದವು ಎಂದು ಅವರೊಂದಿಗಿನ ಕೆಲವು ಕ್ಷಣಗಳನ್ನು ಮಾಜಿ ಶಾಸಕ ಎನ್.ಯೋಗೀಶ್ ಭಟ್ ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News