ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿಗೆ 'ಮುಂಬಯಿ ಯಕ್ಷರಕ್ಷಾ ಪ್ರಶಸ್ತಿ'

Update: 2018-08-17 04:54 GMT

ಮಂಗಳೂರು, ಆ.17: ಮುಂಬಯಿಯ ಅಜೆಕಾರು ಕಲಾಭಿಮಾನಿ ಬಳಗವು ವರ್ಷಂಪ್ರತಿ ನಡೆಸುವ ತಾಳಮದ್ದಳೆ ಸರಣಿಯ ಸಂದರ್ಭದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರಿಗೆ ನೀಡುತ್ತಿರುವ ಯಕ್ಷರಕ್ಷಾ ಪ್ರಶಸ್ತಿಗೆ 2017-18ನೇ ಸಾಲಿನಲ್ಲಿ ಖ್ಯಾತ ಯಕ್ಷಗಾನ ಅರ್ಥಧಾರಿ, ಪ್ರವಚನಕಾರ ಮತ್ತು ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ರೂ.50,000 ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ.

ಮುಂಬಯಿ ಮಹಾನಗರದ ವಿವಿಧೆಡೆ ಅಜೆಕಾರು ಕಲಾಭಿಮಾನಿ ಬಳಗ ಆಯೋಜಿಸಿರುವ 17ನೇ ವರ್ಷದ ತಾಳಮದ್ದಳೆ ಸರಣಿಯ ಸಮಾರೋಪ ಸಮಾರಂಭ ಆ.26ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜರಗಲಿದ್ದು, ಈ ಸಂದರ್ಭ 'ಯಕ್ಷರಕ್ಷಾ ಪ್ರಶಸ್ತಿ- 2018' ಪ್ರದಾನ ಮಾಡಲಾಗುವುದು ಎಂದು ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಯುವ ಮದ್ದಳೆಗಾರ ಪ್ರಶಾಂತ ಶೆಟ್ಟಿ ವಗೆನಾಡು, ಖ್ಯಾತ ಮಹಿಳಾ ಯಕ್ಷಗಾನ ಕಲಾವಿದೆ ಪೂರ್ಣಿಮಾ ಯತೀಶ್ ರೈ ಹಾಗೂ ಮುಂಬಯಿಯ ಪ್ರಮುಖರಿಗೆ ಯಕ್ಷರಕ್ಷಾ ಕಲಾ ಗೌರವ ನೀಡಲಾಗುವುದು ಎಂದವರು ಪ್ರಕಟಿಸಿದ್ದಾರೆ.

ಪುತ್ತೂರು ತಾಲೂಕು ಇರ್ದೆ ಗ್ರಾಮದ ಪ್ರತಿಷ್ಠಿತ  ಬಾಲ್ಯೊಟ್ಟುಗುತ್ತು ಮನೆತನದ ಭಾಸ್ಕರ ರೈ ಕುಕ್ಕುವಳ್ಳಿ ದಿ.ಕಲ್ಲಡ್ಕ ಕರಿಯಪ್ಪ ರೈ ಮತ್ತು ಗಿರಿಜಾ ಕೆ. ರೈ ದಂಪತಿಯ ಪುತ್ರ.  ಎಂ.ಎ, ಎಂ.ಎಡ್ ಪದವೀಧರರಾಗಿರುವ ರೈ ಕೇಂದ್ರ ಸರಕಾರದ ಅಂಚೆ ಮತ್ತು ತಂತಿ ಇಲಾಖೆಯಲ್ಲಿ 14 ವರ್ಷ ದುಡಿದು, ಬಳಿಕ ಚೇಳಾಯರು ಮತ್ತು ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ರಾಜ್ಯ ಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವರು. ಬಾನುಲಿ ಪಠ್ಯ ಮತ್ತು ತುಳು ಪಠ್ಯ ರಚನಾ ಸಮಿತಿ ಸದಸ್ಯರಾಗಿ, ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ ಅವರು ಖ್ಯಾತರು.

ಶೇಣಿ, ಸಾಮಗ, ಪೆರ್ಲ, ಕಾಂತ ರೈ,ತೆಕ್ಕಟ್ಟೆ ಮೊದಲಾದ ಹಳೆ ತಲೆಮಾರಿನ ದಿಗ್ಗಜ ಕಲಾವಿದರೊಂದಿಗೆ ಅರ್ಥಧಾರಿಯಾಗಿ ತಾಳಮದ್ದಳೆ ಕ್ಷೇತ್ರದಲ್ಲಿ ಕಾಣಿಸಿಕೊಂಡ ಕುಕ್ಕುವಳ್ಳಿ, ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ನೂರಾರು ಕಾರ್ಯಕ್ರಮಗಳಲ್ಲಿ, ಯಕ್ಷಗಾನ ಸಪ್ತಾಹಗಳಲ್ಲಿ ಮತ್ತು ಧ್ವನಿಸುರುಳಿಗಳಲ್ಲಿ ಪ್ರಮುಖ ಕಲಾವಿದರಾಗಿ ವಿಭಿನ್ನ ಮನೋಧರ್ಮದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರೊಂದಿಗೆ ವೇಷಧಾರಿಯಾಗಿಯೂ ಗಮನಸೆಳೆದಿದ್ದಾರೆ. ಕನ್ನಡ, ತುಳು, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲೂ ಯಕ್ಷಗಾನ ಆಟ ಕೂಟಗಳನ್ನು ನಡೆಸಿದ್ದಾರೆ. ಗೋಷ್ಠಿ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.

ಕನ್ನಡ ಮತ್ತು ತುಳು ಭಾಷೆಯಲ್ಲಿ  ಕತೆ- ಕವಿತೆ ಲೇಖನ-ನಾಟಕ ವಿಮರ್ಶೆಗಳನ್ನು ಬರೆದಿರುವ ಭಾಸ್ಕರ ರೈ ಅವರು ಯಕ್ಷಿಕಾ,ಒಡ್ಡೋಲಗ,ಯಕ್ಷ ಬಂಟರು, ಪಂಚದುರ್ಗಾ, ಅಭಿರಾಮ, ನೆಯಿ-ಪೇರ್, ಯಕ್ಷರ ಚೆನ್ನ, ಪುಳಿಂಚ ಸ್ಮೃತಿ-ಕೃತಿ ಮುಂತಾದ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಘೋರ ಮಾರಕ, ಗುನ್ಯಾಸುರ ವಧೆ, ಕ್ರಾಂತಿ ಕಹಳೆ, ಸಾವಯವ ವಿಜಯ ಇತ್ಯಾದಿ ಜನ ಜಾಗೃತಿಯ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ.

ಆರ್ಯಭಟ, ಜಿಲ್ಲಾ ರಾಜ್ಯೋತ್ಸವ, ಕಾರಂತ ಸದ್ಭಾವನ, ಸೌರಭ, ಸಾಧನಾ ನೂಪುರ, ಬಂಟ ವಿಭೂಷಣ, ವಿದ್ಯಾರತ್ನ, ತುಳುವೆರೆ ಆಯನೊ, ಪೆರ್ಮೆದ ತುಳುವೆ, ಶೇಣಿ ಶತಮಾನೋತ್ಸವ, ತುಳುನಾಡ ಜ್ಞಾನ ಸೂರ್ಯ-ಇತ್ಯಾದಿ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News