ಮಲೆನಾಡಿನಲ್ಲಿ ಮುಂದುವರಿದ ಮಳೆಯಬ್ಬರ: ನಾಲ್ಕು ಮನೆಗಳು ಕುಸಿತ

Update: 2018-08-17 12:00 GMT

ಚಿಕ್ಕಮಗಳೂರು,ಆ.17: ಜಿಲ್ಲೆಯ ಮಲೆನಾಡು ಭಾಗದಲ್ಲಿ ಶುಕ್ರವಾರವೂ ಮಳೆಯ ಅವಾಂತರಗಳು ಮುಂದುವರಿದಿದ್ದು, ನಿರಂತರ ಮಳೆಯಿಂದಾಗಿ ನಾಲ್ಕು ಮನೆಗಳ ಗೋಡೆಗಳು ಕುಸಿದು ಸಾಮಾನುಗಳು ಜಖಂಗೊಂಡಿರುವುದರಿಂದ ಮನೆಯ ಸದಸ್ಯರು ಆತಂಕಕ್ಕೊಳಗಾಗಿದ್ದರೆ, ಚಾರ್ಮಾಡಿ ಘಾಟ್‍ನಲ್ಲಿ ವಾಹನಧಟ್ಟಣೆಯಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿದ್ದ ಘಟನೆಗಳು ಶುಕ್ರವಾರ ವರದಿಯಾಗಿದೆ.

ಗುರುವಾರ ರಾತ್ರಿ ಹಾಗೂ ಶುಕ್ರವಾರ ಬೆಳಗ್ಗೆ ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ಐದು ತಾಲೂಕು ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ದೃಶ್ಯಗಳು ಕಂಡು ಬಂದವು.

ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ, ಶುಕ್ರವಾರ ಬೆಳಗ್ಗೆ ಆಗಾಗ್ಗೆ ಭಾರೀ ಮಳೆಯಾಗಿದ್ದು, ಉಳಿದಂತೆ ಸಾಧಾರಣ ಮಳೆ ನಿರಂತರವಾಗಿತ್ತು. ತಾಲೂಕು ವ್ಯಾಪ್ತಿಯ ಬಣಕಲ್, ಕೊಟ್ಟಿಗೆಹಾರ ಸುತ್ತಮುತ್ತ ಆಗಾಗ್ಗೆ ಭಾರೀ ಮಳೆಯಾಗಿದ್ದು, ಮೂಡಿಗೆರೆ, ಬಣಕಲ್, ಕೊಟ್ಟಿಗೆಹಾರ, ಚಾರ್ಮಾಡಿ ಮಾರ್ಗವಾಗಿ ಮಂಗಳೂರು, ಉಜಿರೆ, ಧರ್ಮಸ್ಥಳಕ್ಕೆ ಹೊರಟ ಪ್ರವಾಸಿಗರ ವಾಹನಗಳು ಘಾಟಿಯ ಉದ್ದಕ್ಕೂ ಮಂಜು ಕವಿದ ವಾತಾವರಣ ಹಾಗೂ ನಿರಂತರ ಮಳೆಯಿಂದಾಗಿ ಸುಗಮ ಸಂಚಾರ ಸಾಧ್ಯವಾಗದೇ ಪರದಾಡುವಂತಾಗಿತ್ತು. 

ಶಿರಾಡಿ ಘಾಟ್‍ನಲ್ಲಿ ಭೂ ಕುಸಿತದಿಂದಾಗಿ ಸಂಚಾರ ಬಂದ್ ಆಗಿದ್ದ ಪರಿಣಾಮ ಶಿರಾಡಿ ಘಾಟ್ ಮೂಲಕ ಸಕಲೇಶಪುರ, ಹಾಸನ ಮಾರ್ಗದ ವಾಹನಗಳು ಚಾರ್ಮಾಡಿ ಘಾಟ್ ಮೂಲಕವೇ ತೆರಳಬೇಕಾಗಿದ್ದರಿಂದ ಚಾರ್ಮಾಡಿ ಘಾಟ್‍ನಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ವಾಹನ ಧಟ್ಟಣೆ ಹೆಚ್ಚಾಗಿತ್ತು. ಭಾರೀ ವಾಹನಗಳ ಸಂಚಾರದಿಂದಾಗಿ ಘಾಟಿಯ ಕೆಲವೆಡೆ ಟ್ರಾಫಿಕ್ ಜಾಮ್ ಸಂಭವಿಸಿ ಗಂಟೆಗಟ್ಟಲೆ ವಾಹನಗಳು ಟ್ರಾಫಿಕ್ ಜಾಮ್‍ನಲ್ಲಿ ಸಿಲುಕುವಂತಾಗಿತ್ತು. ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರದಿಂದ ಲಘು ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ ಎಂದು ವಾಹನ ಸವಾರರು ಆರೋಪಿಸಿದ್ದು, ಭಾರೀ ವಾಹನಗಳ ಸಂಚಾರವನ್ನು ನಿಷೇದಿಸುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲೂ ನಿರಂತರವಾಗಿ ಸುರಿಯುತ್ತಿರುವ ಸಾಧಾರಣ ಮಳೆಯೊಂದಿಗೆ ಆಗಾಗ್ಗೆ ಭಾರೀ ಮಳೆಯಾದ ಬಗ್ಗೆ ವರದಿಯಾಗಿದೆ. ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಕೊಪ್ಪ ತಾಲೂಕು ವ್ಯಾಪ್ತಿಯಲ್ಲಿ ಮೂರು ಮನೆಗಳ ಗೋಡೆಗಳು ಕುಸಿದು ಬಿದ್ದ ಪರಿಣಾಮ ನಿವಾಸಿಗಳು ಆತಂಕಕ್ಕೊಳಗಾಗಿರುವ ಘಟನೆ ಶುಕ್ರವಾರ ಬೆಳಗ್ಗೆ ವರದಿಯಾಗಿದೆ. ತಾಲೂಕು ವ್ಯಾಪ್ತಿಯಲ್ಲಿರುವ ಜಯಪುರ ಸಮೀಪದ ಹೇರೂರು ಗ್ರಾಮದಲ್ಲಿ ಶಂಕರ್ ಹಾಗೂ ರಾಮು ಎಂಬವರ ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದು, ಈ ಪೈಕಿ ಒಂದು ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಮಳೆಯಿಂದಾಗಿ ಮನೆಯ ಗೋಡೆಗಳ ಮೇಲೆ ನೀರು ಬಿದ್ದು ಗೋಡೆಗಳು ಕುಸಿದು ಬಿದ್ದಿವೆ ಎಂದು ತಿಳಿದು ಬಂದಿದ್ದು, ಸದ್ಯ ಮನೆಯ ಸದಸ್ಯರು ಅತಂತ್ರಗೊಂಡಿದ್ದಾರೆ. 

ಅಲ್ಲದೇ ಇದೇ ತಾಲೂಕು ವ್ಯಾಪ್ತಿಯ ಮೇಗೂರು ವ್ಯಾಪ್ತಿಯಲ್ಲಿ ತಿಮ್ಮೆಗೌಡ ಎಂಬವರ ಮನೆಯ ಗೋಡೆಯೂ ಕುಸಿದು ಬಿದ್ದಿದ್ದು, ಮನೆ ಭಾಗಶಃ ಜಖಂಗೊಂಡಿದೆ. ತಾಲೂಕಿನ ಕಂದಾಯಾಧಿಕಾರಿಗಳು ಜಖಂಗೊಂಡ ಮನೆಗಳಿಗೆ ಭೇಟಿ ನೀಡಿ ವರದಿ ಸಂಗ್ರಹಿಸಿದ್ದಾರೆಂದು ತಿಳಿದು ಬಂದಿದೆ.

ಇನ್ನು ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯ ಅಂಬಳೆ ಗ್ರಾಮದಲ್ಲಿ ಜಯಮ್ಮ ಎಂಬ ವೃದ್ಧೆಯೊಬ್ಬರ ಮನೆಯ ಗೋಡೆ ಸಂಪೂರ್ಣವಾಗಿ ಕುಸಿತಗೊಂಡ ಪರಿಣಾಮ ಮನೆ ಜಖಂಗೊಂಡಿದೆ. ಗೋಡೆ ಕುಸಿತದಿಂದಾಗಿ ಮನೆಯಲ್ಲಿದ್ದ ವಸ್ತುಗಳು ಮಣ್ಣಿನಡಿಗೆ ಸಿಲುಕಿ ಹಾನಿಯಾಗಿವೆ. ಸೂಕ್ತ ಪರಿಹಾರ ನೀಡುವಂತೆ ಜಯಮ್ಮ ಕಂದಾಯಧಿಕಾರಿಗಳಿಗೆ ಮನವಿ ಮಾಡಿದ್ದು, ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆಂದು ತಿಳಿದು ಬಂದಿದೆ.

ತಾಲೂಕಿನ ಮುಳ್ಳಯ್ಯನಗಿರಿ ಹಾಗೂ ದತ್ತಪೀಠ ಸಂಪರ್ಕ ರಸ್ತೆಯ ಕೆಲವೆಡೆ ನಿರಂತರ ಮಳೆಯಿಂದಾಗಿ ಗುಡ್ಡ ಕುಸಿಯುತ್ತಿರುವ ಘಟನೆಗಳು ಶುಕ್ರವಾರವೂ ಮುಂದುವರೆದಿದೆ. ಭೂ ಕುಸಿತದಿಂದಾಗಿ ರಸ್ತೆಯ ಮೇಲೆ ಮಣ್ಣು ಬಿದ್ದಿರುವುದರಿಂದ ಗುರುವಾರ ಇಡೀ ದಿನ ಗಿರಿ ಮಾರ್ಗದ ರಸ್ತೆಯನ್ನು ವಾಹನಗಳ ಸಂಚಾರಕ್ಕೆ ಬಂದ್ ಮಾಡಲಾಗಿತ್ತು. ಶುಕ್ರವಾರವೂ ಅಲ್ಲಲ್ಲಿ ಭೂಕುಸಿತ ಉಂಟಾದ ಬಗ್ಗೆ ವರದಿಯಾಗಿದ್ದು, ಭಾರೀ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ನಿರಂತರ ಮಳೆ ಹಾಗೂ ಭೂ ಕುಸಿತ ಉಂಟಾಗುತ್ತಿರುವುದರಿಂದ ಸದ್ಯ ಇತ್ತ ಪ್ರವಾಸ ಮಾಡುವುದು ಸೂಕ್ತವಲ್ಲ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News