ಆ.19ರಂದು ಬ್ಯಾರೀಸ್ ಕಲ್ಚರಲ್ ಫೋರಮ್‌ನಿಂದ ವಿದ್ಯಾರ್ಥಿ ವೇತನ, ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ

Update: 2018-08-17 13:01 GMT

ಮಂಗಳೂರು, ಆ.17: ಆರ್ಥಿಕವಾಗಿ ಹಿಂದುಳಿದಿರುವ ಕೌಟುಂಬಿಕ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ದುಬೈ ಬ್ಯಾರೀಸ್ ಕಲ್ಚರಲ್ ಫೋರಂ(ಬಿಸಿಎಫ್)ನಿಂದ ವಿದ್ಯಾರ್ಥಿ ವೇತನ, ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವನ್ನು ನಗರದ ಪುರಭವನದಲ್ಲಿ ಆ.19ರಂದು ಬೆಳಗ್ಗೆ 9:30ಕ್ಕೆ ಶೈಕ್ಷಣಿಕ ಸೆಮಿನಾರ್ ಹಾಗೂ ಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಸಿಎಫ್ ಪೋಷಕ ಬಿ.ಎಂ.ಮುಮ್ತಾಝ್ ಅಲಿ, ಕಳೆದ 16 ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಈ ವರ್ಷ ಪಿಯುಸಿಯಿಂದ ಸ್ನಾತಕೋತ್ತರ ಪದವಿಯ ತನಕ ಸುಮಾರು 500ಕ್ಕೂ ಹೆಚ್ಚು ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಹೇಳಿದರು.

ಉಡುಪಿ ಮತ್ತು ದ.ಕ. ಜಿಲ್ಲೆಯ ಸುಮಾರು 50 ಮಹಿಳೆಯರಿಗೆ ಸ್ವ-ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಗುವುದು. ಈ ವರ್ಷದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕರಾವಳಿ ಕರ್ನಾಟಕದ ಗ್ರಾಮೀಣ ಮಟ್ಟದ ಮಹಿಳೆಯರನ್ನು ಪ್ರೋತ್ಸಾಹಿಸಲು ಕಲಾ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಆ.19ರಂದು ಬೆಳಗ್ಗೆ 9:30ಕ್ಕೆ ನಡೆಯುವ ವೃತ್ತಿ ಮಾರ್ಗದರ್ಶನ ವಿಚಾರ ಸಂಕಿರಣ, ಸೆಮಿನಾರ್ ಕಾರ್ಯಕ್ರಮವನ್ನು ಯುಎಇ ಲಂಡನ್ ಅಮೆರಿಕನ್ ಸಿಟಿ ಕಾಲೇಜಿನ ನಿರ್ದೇಶಕ ಡಾ.ಪ್ರೊ.ಕಾಪು ಮುಹಮ್ಮದ್ ನಡೆಸಿಕೊಡಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಶಿಕ್ಷಣ ಹಾಗೂ ನೌಕರರಿಗೆ ಸಂಬಂಧಪಟ್ಟ ಸಮಗ್ರ ಮಾಹಿತಿಯನ್ನು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು ಇದರ ಅಧ್ಯಕ್ಷ ರಿಯಾಝ್ ಅಹ್ಮದ್ ಕಣ್ಣೂರು ಮಾಹಿತಿ ನೀಡಲಿದ್ದಾರೆ.

ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಲಿದ್ದು, ಸಭಾಧ್ಯಕ್ಷತೆಯನ್ನು ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಆಝಾದ್ ಸಮೂಹ ಸಂಸ್ಥೆಯ ನಿರ್ದೇಶಕ ಮನ್ಸೂರ್ ಅಹ್ಮದ್, ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಎ.ಎಂ.ಖಾನ್, ಡಿಕೆಎಸ್‌ಸಿಯ ಕಾರ್ಯಾಧ್ಯಕ್ಷ ಹಾತಿಂ ಕಂಚಿ, ಮಿಸ್ಬಾ ವುಮೆನ್ಸ್ ಕಾಲೇಜಿನ ಪ್ರಾಂಶುಪಾಲೆ ಝಾಹಿದ್ ಜಲೀಲ್ ಭಾಗವಹಿಸಲಿದ್ದಾರೆ.

 ಅಪರಾಹ್ನ 2 ಗಂಟೆಗೆ ಮುಖ್ಯ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸಲಿದ್ದು, ವಿದ್ಯಾರ್ಥಿ ವೇತನ ವಿತರಣೆಯ ಶುಭಾರಂಭವನ್ನು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ನೆರವೇರಿಸಲಿದ್ದಾರೆ. ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿಯ ಖಾಝಿ ಅಲ್ಹಾಜ್ ಇ.ಕೆ.ಇಬ್ರಾಹೀಂ ಮುಸ್ಲಿಯಾರ್ ದುಆಗೈಯಲಿದ್ದಾರೆ. ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಬಿ.ಎಂ. ಫಾರೂಕ್, ಬ್ಯಾರೀಸ್ ಗ್ರೂಪ್‌ನ ಚೇರ್‌ಮನ್ ಸೈಯದ್ ಬ್ಯಾರಿ, ಯೆನೆಪೊಯ ವಿವಿಯ ಕುಲಪತಿ ವೈ.ಅಬ್ದುಲ್ಲಾ ಕುಂಞಿ, ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ವಿಶ್ವಾಸ್ ಬಾವಾ ಬಿಲ್ಡರ್ಸ್‌ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆ, ಅಲ್ ಮುಝೈನ್ ಗ್ರೂಪ್‌ನ ಚೇರ್‌ಮನ್ ಝಕರಿಯ ಜೋಕಟ್ಟೆ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಕರಂಬಾರು, ಸೆನೆಟ್ ಸದಸ್ಯ ಡಾ.ಯು.ಟಿ.ಇಫ್ತಿಕಾರ್, ಮುಕ್ಕ ಸೀಫುಡ್‌ನ ಎಂ.ಡಿ. ಕೆ.ಮುಹಮ್ಮದ್ ಹಾರಿಸ್, ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಇದರ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಶೇಖ್ ಮೊಯ್ದಿನ್ ಕರ್ನಿರೆ, ಕರ್ನಾಟಕ ಎನ್‌ಆರ್‌ಐ ಫೋರಂ ಯುಎಇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಎಸೆಸೆಲ್ಸಿ, ಪಿಯುಸಿ ಮತ್ತು ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಬಿಸಿಎಫ್ ಸ್ಕಾಲರ್‌ಶಿಪ್ ಕಮಿಟಿ ಚೇರ್‌ಮನ್ ಎಂ.ಇ.ಮೂಳೂರು, ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್, ಉಪಾಧ್ಯಕ್ಷರಾದ ಅಬ್ದುಲ್ಲತೀಫ್ ಮುಲ್ಕಿ, ಅಮೀರುದ್ದೀನ್ ಎಸ್.ಇ. ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News