“ವಾಜಪೇಯಿ ಬಿಜೆಪಿಯ ನೆಹರು ಆಗಿದ್ದರು”

Update: 2018-08-17 15:02 GMT

ರಾಷ್ಟ್ರೀಯವಾದಿ,ಅದ್ಭುತ ವಾಗ್ಮಿ,ಬಿಜೆಪಿಯ ಜವಾಹರಲಾಲ ನೆಹರು....ಇವೆಲ್ಲ ಪತ್ರಿಕೆಗಳು ಗುರುವಾರ ನಿಧನರಾದ ಮಾಜಿ ಪ್ರಧಾನಿಯನ್ನು ಬಣ್ಣಿಸಲು ಬಳಸಿಕೊಂಡ ಪದಗಳು. ‘ಭಾರತದ ಅಂತರರಾಷ್ಟ್ರೀಯ ಸಂಬಂಧಗಳನ್ನು ಬಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’ ಎಂದು ಬಣ್ಣಿಸುವ ಮೂಲಕ ಜಾಗತಿಕ ಪತ್ರಿಕೆಗಳೂ ವಾಜಪೇಯಿಯವರಿಗೆ ಗೌರವಗಳನ್ನು ಸಲ್ಲಿಸಿವೆ.

ಇಂತಹ ಕೆಲವು ಆಯ್ದ ಹೇಳಿಕೆಗಳು ಇಲ್ಲಿವೆ,ಓದಿ....

  “ಆರಂಭದ ಬಿಜೆಪಿಯನ್ನು ಜಾತ್ಯತೀತ,ಜನತಾ ಪಕ್ಷದ ಸಮಾಜವಾದಿ ಉತ್ತರಾಧಿಕಾರಿಯಾಗಿ ರೂಪಿಸಿದ್ದು ವಾಜಪೇಯಿಯವರ ‘ಪಾಪ’ವಾಗಿತ್ತು. ಅವರು ಅಯೋಧ್ಯೆ ಚಳವಳಿಯನ್ನೂ ವಿರೋಧಿಸಿದ್ದರು. 1996ರ ಚುನಾವಣೆಗಳಲ್ಲಿ ಎಲ್.ಕೆ.ಆಡ್ವಾಣಿ ಅವರು ಪ್ರಧಾನಿ ಹುದ್ದೆಗೆ ಆರೆಸ್ಸೆಸ್‌ನ ಆಯ್ಕೆಯಾಗಿದ್ದರು. ಆದರೆ 1995,ನವೆಂಬರ್‌ನಲ್ಲಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಾಜಪೇಯಿ ಅವರೇ ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಪ್ರಕಟಿಸುವ ಮೂಲಕ ಆಡ್ವಾಣಿಯವರು ವೇದಿಕೆಯಲ್ಲಿದ್ದವರನ್ನು ಅಚ್ಚರಿಯಲ್ಲಿ ಕೆಡವಿದ್ದರು ಮತ್ತು ಆರೆಸ್ಸೆಸನ್ನು ಹತಾಶಗೊಳಿಸಿದ್ದರು. ಅನಂತರ 1996,1998 ಮತ್ತು 1999ರಲ್ಲಿ ಹೀಗೆ ಮೂರು ಬಾರಿ ಪ್ರಧಾನಿಯಾಗಿದ್ದ ವಾಜಪೇಯಿಯವರನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಾಗಿರಲಿಲ್ಲ ಮತ್ತು ಆಡ್ವಾಣಿ ನಂ.2 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.”

ವಿನಯ್ ಸೀತಾಪತಿ,ದಿ ಇಂಡಿಯನ್ ಎಕ್ಸ್‌ಪ್ರೆಸ್

*****************************************

 “ವಾಜಪೇಯಿ ಅದ್ಭುತ ವಾಗ್ಮಿಯಾಗಿದ್ದರು. ಅವರಿಗೆ ಶೂನ್ಯದಿಂದ ಭಾಷಣವನ್ನು ಮಾಡುವ ಮತ್ತು ತನ್ನ ಸಭಿಕರನ್ನು ಮಂತ್ರಮುಗ್ಧರನ್ನಾಗಿಸುವ ಸಾಮರ್ಥ್ಯವಿತ್ತು. ಅವರೇನು ಮಾತನಾಡುತ್ತಾರೆ ಎನ್ನುವುದನ್ನು ಜನರು ನೋಡುತ್ತಿರಲಿಲ್ಲ,ಬದಲಿಗೆ ಅವರ ಭಾಷಣಗಳಲ್ಲಿ ಸಾಮಾನ್ಯವಾಗಿರುತ್ತಿದ್ದ ಕುಟುಕಿಗಾಗಿ ಕಾಯುತ್ತಿದ್ದರು. ಮುಂಬರುವ ‘ರಾಮ ಚಂಡಮಾರುತ’ದ ಬಗ್ಗೆ ಮಾತುಗಳು ನಡೆಯುತ್ತಿದ್ದಾಗ 1991ರ ಚುನಾವಣೆಗಳಿಗೆ ಮುನ್ನ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅವರು ಹೇಳಿದ್ದು ಇನ್ನೂ ನನಗೆ ನೆನಪಿದೆ. ಚಂಡಮಾರುತದ ಸಮಸ್ಯೆಯೆಂದರೆ ನಾವು ಅದರೊಂದಿಗೆ ಹಾರಿಹೋಗದಂತೆ ಎಚ್ಚರಿಕೆಯನ್ನು ವಹಿಸಬೇಕು ಎಂದಿದ್ದ ಅವರು, ಬಿಜೆಪಿ ಧರ್ಮಸಭೆಯಲ್ಲ ಮತ್ತು ಅದೊಂದು ರಾಜಕೀಯ ಪಕ್ಷವಾಗಿದೆ ಎಂದು ಕುಟುಕಿದ್ದರು. ಅವರ ಈ ಹೇಳಿಕೆ ಎಲ್ಲವನ್ನೂ ತಿಳಿಸಿತ್ತು.”

ಸ್ವಪನ್ ದಾಸಗುಪ್ತಾ,ದಿ ಟೈಮ್ಸ್ ಆಫ್ ಇಂಡಿಯಾ

*****************************************

“ತಾನು ಪ್ರತಿಪಕ್ಷದಲ್ಲಿದ್ದಾಗ ಸೌಥ್ ಬ್ಲಾಕ್‌ನ ಮೊಗಸಾಲೆಯಲ್ಲಿ ದಿನವೂ ನೋಡುತ್ತಿದ್ದ ನೆಹರು ಅವರ ಭಾವಚಿತ್ರವನ್ನು ಮರುಸ್ಥಾಪನೆಯಾಗುವಂತೆ ಮಾಡಿದ್ದು ಹೇಗೆ ಎನ್ನುವುದನ್ನು ಪ್ರಧಾನಿಯಾಗಿ ಸಂಸತ್ತಿನಲ್ಲಿ ಭಾಷಣದಲ್ಲಿ ಅವರು ಸ್ಮರಿಸಿಕೊಂಡಿದ್ದರು. ‘ಅದನ್ನು ತೆಗೆದಿದ್ದು ಯಾರು ಎಂದಷ್ಟೇ ನಾನು ಕೇಳಿದ್ದೆ ಮತ್ತು ಭಾವಚಿತ್ರವು ಸ್ವಸ್ಥಾನದಲ್ಲಿ ಮರಳಿ ಪ್ರತ್ಯಕ್ಷವಾಗಿತ್ತು ’ಎಂದು ಅವರು ಹೇಳಿದ್ದರು. ತಾನು ನೆಹರು ಅವರ ಆರಾಧಕ ಎನ್ನುವುದನ್ನು ವಾಜಪೇಯಿಯವರು ಎಂದೂ ಮುಚ್ಚಿಟ್ಟಿರಲಿಲ್ಲ. ನೆಹರು ಅವರೂ ವಾಜಪೇಯಿಯವರನ್ನು ಬಹುವಾಗಿ ಮೆಚ್ಚಿಕೊಂಡಿದ್ದು, ಈ ಯುವನಾಯಕ ಮುಂದೆ ದೇಶದ ಪ್ರಧಾನಿಯಾಗುತ್ತಾನೆ ಎಂದು ಅಂದೇ ಭವಿಷ್ಯ ನುಡಿದಿದ್ದರು. ವಾಜಪೇಯಿ ನಿಸ್ಸಂಶಯವಾಗಿ ಬಿಜೆಪಿಯ ನೆಹರು ಆಗಿದ್ದರು.”

ವಿನೋದ ಶರ್ಮಾ,ಹಿಂದುಸ್ಥಾನ ಟೈಮ್ಸ್

*********************************

 ವಾಜಪೇಯಿಯವರ ನಿಧನವನ್ನು ಪ್ರಕಟಿಸಿದಾಗ ಆರೆಸ್ಸೆಸ್ ಅಥವಾ ಬಿಜೆಪಿಯ ಸಿದ್ಧಾಂತವನ್ನು ಎಂದೂ ಒಪ್ಪಿಕೊಂಡಿರದ ಕೋಟ್ಯಂತರ ಭಾರತೀಯರು ಸಹ ನಷ್ಟದ ಭಾವನೆ ಮತ್ತು ನೋವನ್ನು ಅನುಭವಿಸಿದ್ದರು ಎಂದರೆ ಅದು ಅತಿಶಯೋಕ್ತಿಯಲ್ಲ. ಆಧುನಿಕ ಯುಗದ ಜಾಹೀರಾತು ವ್ಯವಸ್ಥೆ ಮತ್ತು ಸಾಮಾಜಿಕ ಮಾಧ್ಯಮಗಳ ನೆರವಿಲ್ಲದ, ಪ್ರಭಾವಿ ವ್ಯಕ್ತಿತ್ವವನ್ನು ಹೊಂದಿರುವ ನಿಜವಾದ ಜನನಾಯಕರು ಮಾತ್ರ ತಮ್ಮನ್ನೆಂದೂ ನೋಡಿಯೇ ಇರದ ಜನಮಾನಸದಲ್ಲಿಯೂ ಇಂತಹ ಭಾವನೆಗಳನ್ನು ಹುಟ್ಟಿಸಬಲ್ಲರು.

ಮಾನಿನಿ ಚಟರ್ಜಿ,ದಿ ಟೆಲಿಗ್ರಾಫ್

***************************

“ಎರಡು ಐತಿಹಾಸಿಕ ಸಮಸ್ಯೆಗಳಾದ ಕಾಶ್ಮೀರ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಭಾರತವನ್ನು ಭೂತಕಾಲದ ಬಂಧನದಿಂದ ಮುಕ್ತಗೊಳಿಸಲು ಪ್ರಯತ್ನಿಸಿದ್ದು ಮತ್ತು ಉಪಖಂಡದಲ್ಲಿ ಮಾದರಿ ಶಾಂತಿಯನ್ನು ಸೃಷ್ಟಿಸಿದ್ದು ಪ್ರಧಾನಿಯಾಗಿ ವಾಜಪೇಯಿಯವರ ಪ್ರಮುಖ ಸಾಧನೆಯಾಗಿತ್ತು. ಆದರೆ ಅವರು ಯಶಸ್ವಿಯಾಗಿರಲಿಲ್ಲ ಎನ್ನುವುದು ನಿಜ. ಅವರು ಅಧಿಕಾರದಲ್ಲಿದ್ದಾಗ ಈ ನಿಟ್ಟಿನಲ್ಲಿ ಸ್ವಲ್ಪ ಪ್ರಗತಿಯನ್ನು ಸಾಧಿಸಿದ್ದರು ಎನ್ನುವುದನ್ನು ನಿರಾಕರಿಸುವಂತಿಲ್ಲ.”

ಸುಧೀಂದ್ರ ಕುಲಕರ್ಣಿ,ದಿ ಹಿಂದು

**************************

“ಕವಿ ಮನಸ್ಸಿನ ಯುವ ವಾಜಪೇಯಿ ಕಾನೂನು,ಪತ್ರಿಕೋದ್ಯಮ ಮತ್ತು ಬ್ರಿಟಿಷರ ವಿರುದ್ಧ ಬಂಡಾಯ ಇವೆಲ್ಲದರಲ್ಲಿ ತೊಡಗಿಕೊಂಡಿದ್ದರು. ಒಮ್ಮೆ ಅಜೇಯವಾಗಿದ್ದ ಗಾಂಧಿ ಮತ್ತು ನೆಹರು ಅವರ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷಕ್ಕೆ ವಿರೋಧಿಯಾಗಿ ಹಿಂದು ರಾಷ್ಟ್ರವಾದಿ ಪ್ರತಿಪಕ್ಷದ ನಾಯಕನಾಗಿದ್ದ ಅವರು ತನ್ನ 50 ವರ್ಷಗಳ ರಾಜಕೀಯಲ್ಲಿ ಭಾರತದ ಹೊರಗೆ ಪರಿಚಿತರಾಗಿರಲಿಲ್ಲ. ಆದರೆ ತನ್ನ 70ರ ದಶಕದ ಆರು ವರ್ಷಗಳಲ್ಲಿ ಅವರು ವಿಶ್ವದ ಎರಡನೇ ಅತ್ಯಂತ ಹೆಚ್ಚಿನ ಜನಸಂಖ್ಯೆಯ ದೇಶದ ಮುಖವಾಗಿ ಹೊರಹೊಮ್ಮಿದ್ದರು.”

ದಿ ನ್ಯೂಯಾರ್ಕ್ ಟೈಮ್ಸ್

********************

“ಪ್ರಧಾನಿಯಾಗಿ ಭಾರತವನ್ನು ಪರಮಾಣು ಶಕ್ತಿಯನ್ನಾಗಿ ಮಾಡಿದ್ದ ವಾಜಪೇಯಿ ಅದ್ಭುತ ವಾಗ್ಮಿಯಾಗಿದ್ದು,ತನ್ನ ಭಾಷಣಗಳಲ್ಲಿ ತನ್ನದೇ ಕವಿತೆಗಳ ಸಾಲುಗಳನ್ನು ಉಲ್ಲೇಖಿಸುತ್ತಿದ್ದರು. ಹೆಚ್ಚಿನ ಜನರು ಅವರನ್ನು ರಾಜಕಾರಣಿಗಿಂತ ದಾರ್ಶನಿಕರಾಗಿಯೇ ನೋಡುತ್ತಿದ್ದರು.”

ದಿ ವಾಷಿಂಗ್ಟನ್ ಪೋಸ್ಟ್

********************

“ಮಾಜಿ ಪತ್ರಕರ್ತ ಹಾಗೂ ಕವಿ ಪರಿವರ್ತಿತ ರಾಜಕಾರಣಿ ವಾಜಪೇಯಿ ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರು ಇನ್ನೂ ಅಧಿಕಾರದಲ್ಲಿದ್ದಾಗ ಸಂಸತ್‌ಗೆ ಆಯ್ಕೆಯಾಗಿದ್ದ ಕೆಲವೇ ಪ್ರತಿಪಕ್ಷ ಸಂಸದರಲ್ಲಿ ಒಬ್ಬರಾಗಿದ್ದರು. ನೆಹರು 1947ರಿಂದ 1964ರಲ್ಲಿ ನಿಧನರಾಗುವವರೆಗೆ ಪ್ರಧಾನಿಯಾಗಿದ್ದರು. ವಾಜಪೇಯಿಯವರ ಐದು ದಶಕಗಳ ರಾಜಕಾರಣವು 1990ರ ದಶಕದಲ್ಲಿ ಅವರ ಅದ್ಭುತ ವಾಕ್‌ಪಟುತ್ವ ದೇಶಾದ್ಯಂತ ಅವರ ರ್ಯಾಲಿಗಳಿಗೆ ಸಾವಿರಾರು ಜನರನ್ನು ಆಕರ್ಷಿಸತೊಡಗಿದಾಗ ಉತ್ತುಂಗಕ್ಕೇರಿತ್ತು”

.ದಿ ಗಾರ್ಡಿಯನ್

**************

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News