ವಿವಾಹದ ಪ್ರಸ್ತಾಪ ಬಂದಾಗ ಸ್ನೇಹಿತನ ಮನೆಯ ಕೊಠಡಿಗೆ ಬೀಗ ಹಾಕಿ ಕುಳಿತಿದ್ದ ವಾಜಪೇಯಿ !

Update: 2018-08-18 14:30 GMT

ಕಾನ್ಪುರ್, ಆ.18: ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಜನ್ಮ ಬ್ರಹ್ಮಚಾರಿಯಾಗಿದ್ದರು. ಅವರ ಅಚಲ ಮನಸ್ಸೇ ಇದಕ್ಕೆ ಕಾರಣವಾಗಿತ್ತು. ತಮ್ಮ ಹೆತ್ತವರು ತಮಗಾಗಿ ವಧುವನ್ನು ಹುಡುಕುತ್ತಿದ್ದಾರೆಂದು ತಿಳಿದ ಕೂಡಲೇ ಯುವಕರಾಗಿದ್ದಾಗ ವಾಜಪೇಯಿ ತಮ್ಮ ಸ್ನೇಹಿತನ ಮನೆಯಲ್ಲಿ ಮೂರು ದಿನಗಳ ಕಾಲ ಕೊಠಡಿಯೊಂದರಲ್ಲಿ ಬಾಗಿಲು ಹಾಕಿ ಕುಳಿತುಕೊಂಡು ಬಿಟ್ಟಿದ್ದರಂತೆ. ಈ ಬಗ್ಗೆ ಅವರ ಸ್ನೇಹಿತ ದಿವಂಗತ ಗೋರೆ ಲಾಲ್ ತ್ರಿಪಾಠಿ ಅವರ ಪುತ್ರ ವಿಜಯ್ ಪ್ರಕಾಶ್ ವಿವರಿಸಿದ್ದಾರೆ.

1940ರ ಮಧ್ಯ ಭಾಗದಲ್ಲಿ ವಾಜಪೇಯಿಯವರು ಕಾನ್ಪುರದ ಡಿಎವಿ ಕಾಲೇಜಿನಲ್ಲಿ ಸ್ನಾತ್ತಕೋತ್ತರ ವಿದ್ಯಾರ್ಥಿಯಾಗಿದ್ದಾಗ ಅವರ ಹೆತ್ತವರು ಅವರಿಗೆ ಮದುವೆ ಮಾಡಲು ಯೋಚಿಸುತ್ತಿದ್ದಾರೆಂದು ತಿಳಿಯುತ್ತಲೇ ಜಿಲ್ಲೆಯ ಪತಾರ ಬ್ಲಾಕ್ ನಲ್ಲಿರುವ ರಾಯಪುರ್ ಗ್ರಾಮದಲ್ಲಿರುವ ತ್ರಿಪಾಠಿ ಮನೆಗೆ ಧಾವಿಸಿ ಬಂದು ಅಲ್ಲಿಯೇ ಉಳಿದುಕೊಂಡಿದ್ದರು. ಆರೆಸ್ಸೆಸ್ ಶಾಖಾ ಸಭೆಗಳಿಗೆ ಹೋಗುವ ಸಂದರ್ಭ ಅವರಿಬ್ಬರೂ ಸ್ನೇಹಿತರಾಗಿದ್ದರು.

``ಅತಿಥಿಗಳಿಗೆಂದು ಮೀಸಲಿರಿಸಲಾದ ಕೊಠಡಿಯಲ್ಲಿ ಅಟಲ್‍ ಜಿ ಕುಳಿತಿದ್ದರು  ಹೊರಗಿನಿಂದ ಬೀಗ ಹಾಕುವಂತೆ  ಹೇಳಿದ್ದರು ಎಂದು ನನ್ನ ತಂದೆ ನಮಗೆ ಹೇಳುತ್ತಿದ್ದರು. ತನಗೆ ಊಟ ತಿಂಡಿ ಬೇಕಿದ್ದಾಗ ಅಥವಾ ಶೌಚಾಲಯಕ್ಕೆ ಹೋಗಬೇಕೆಂದಿದ್ದಾಗ ಬಾಗಿಲು ಬಡಿಯುತ್ತಿದ್ದರಂತೆ ಅಟಲ್”.

ವಾಜಪೇಯಿ ರಾಷ್ಟ್ರ ನಾಯಕರಾದ ನಂತರವೂ ಅವರು ತಮ್ಮ  ಗೆಳೆಯ ತ್ರಿಪಾಠಿ ಕುಟುಂಬವನ್ನು ಮರೆತಿರಲಿಲ್ಲ. ``ಅವರು ವಿಪಕ್ಷ ನಾಯಕರಾಗಿದ್ದಾಗ ಲಕ್ನೋದಲ್ಲಿ 1989ರಲ್ಲಿ ಅವರನ್ನು ಭೇಟಿಯಾಗಿ ನನಗೆ ಉದ್ಯೋಗ ದೊರಕಿಸಿ ಕೊಡಲು ಸಹಾಯ ಕೋರಿದ್ದೆ. ಆಗ ಅವರೇನೂ ಭರವಸೆ ನೀಡಿರದೇ ಇದ್ದರೂ ಅವರ ಪ್ರಯತ್ನಗಳಿಂದಾಗಿಯೇ ನನಗೆ ಕಾನ್ಪುರದ ಮ್ಯಾಗಝಿನ್ ಒಂದರಲ್ಲಿ ಉದ್ಯೋಗ ದೊರೆಯಿತು,'' ಎಂದು ವಿಜಯ್ ಪ್ರಕಾಶ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News