ಕೇರಳ: ಸಾಕಿದ್ದ 25 ನಾಯಿಗಳನ್ನು ಬಿಟ್ಟು ಪ್ರವಾಹಪೀಡಿತ ಪ್ರದೇಶದಿಂದ ತೆರಳಲು ನಿರಾಕರಿಸಿದ ಮಹಿಳೆ

Update: 2018-08-18 14:59 GMT

ಕೊಚ್ಚಿ,ಆ.18: ಕೇರಳದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಮನೆಯಿಂದ ತನ್ನ 25 ನಾಯಿಗಳನ್ನು ಬಿಟ್ಟು ರಕ್ಷಣಾ ಸಿಬ್ಬಂದಿ ಜೊತೆ ತೆರಳಲು ಮಹಿಳೆಯೊಬ್ಬರು ನಿರಾಕರಿಸಿರುವುದಾಗಿ ರಕ್ಷಣಾ ತಂಡದ ಸದಸ್ಯರು ಶನಿವಾರ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

 ಮಾನವೀಯ ಸಮಾಜ ಅಂತರರಾಷ್ಟ್ರೀಯದ ಸದಸ್ಯರು ಸ್ಥಳಕ್ಕೆ ಧಾವಿಸಿದಾಗ ನೆರೆನೀರಿನಿಂದ ತುಂಬಿದ್ದ ಮನೆಯ ಹಾಸಿಗೆಯ ಮೇಲೆ ನಾಯಿಗಳು ನಿಂತಿರುವುದು ಕಂಡುಬಂದಿರುವಾಗಿ ಪ್ರಾಣಿದಯಾ ಸಂಘದ ಸದಸ್ಯರೊಬ್ಬರು ತಿಳಿಸಿದ್ದಾರೆ. ಸುನೀತಾ ಎಂಬ ಈ ಮಹಿಳೆಯ ಮನೆಯು ಕೇರಳದಲ್ಲಿ ಮಳೆಯಿಂದಾಗಿ ಅತ್ಯಂತ ತೀವ್ರವಾಗಿ ಬಾಧಿಸಲ್ಪಟ್ಟಿರುವ ತ್ರಿಶೂರ್‌ನಲ್ಲಿರುವುದಾಗಿ ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ. ಮೊದಲಿಗೆ ರಕ್ಷಣಾ ತಂಡ ಸುನೀತಾರನ್ನು ರಕ್ಷಿಸಲು ಸ್ಥಳಕ್ಕೆ ತೆರಳಿದಾಗ ಆಕೆ ತನ್ನ 25 ನಾಯಿಗಳನ್ನೂ ಜೊತೆಗೆ ಕರೆದುಕೊಂಡು ಹೋಗಬೇಕೆಂದು ತಿಳಿಸಿದ್ದಾರೆ. ಆದರೆ ಇದು ಅಸಾಧ್ಯವಾದ ಕೆಲಸವಾದ್ದರಿಂದ ಆಕೆ ರಕ್ಷಣಾ ತಂಡವನ್ನೇ ವಾಪಸ್ ಕಳುಹಿಸಿದ್ದು ತಾನು ನೆರೆಪೀಡಿತ ಮನೆಯಲ್ಲಿ ನಾಯಿಗಳ ಜೊತೆ ಇರಲು ಮುಂದಾಗಿದ್ದಾರೆ. ಹೇಗಾದರೂ ಪ್ರಾಣಿದಯಾ ಸಂಘದ ಸದಸ್ಯರ ಜೊತೆ ಸಂಪರ್ಕ ಸಾಧಿಸಿದ ಸುನೀತಾ ಮತ್ತಾಕೆಯ ಪತಿಯನ್ನು ಅಂತಿಮವಾಗಿ ಅವರ ನಾಯಿಗಳ ಜೊತೆ ರಕ್ಷಿಸಲಾಗಿದೆ. ಸದ್ಯ ನಿರಾಶ್ರಿತರಿಗಾಗಿ ನಿರ್ಮಿಸಲಾಗಿರುವ ಶಿಬಿರಗಳಲ್ಲಿ ಪ್ರಾಣಿಗಳನ್ನು ತರಲು ಅವಕಾಶ ನಿರಾಕರಿಸಿರುವುದರಿಂದ ಸುನೀತ ಮತ್ತಾಕೆಯ ನಾಯಿಗಳಿಗೆ ವಿಶೇಷ ಶಿಬಿರವನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News