3.36 ಕೋಟಿ ರೂ. ಹಳೆನೋಟು ಪತ್ತೆ: ಮೂವರ ಬಂಧನ
ಸೂರತ್, ಆ.18: ಗುಜರಾತ್‌ನ ಸೂರತ್‌ನಲ್ಲಿರುವ ಕಟೊದರ ಎಂಬ ಪ್ರದೇಶದಲ್ಲಿ 3.36 ಕೋಟಿ ರೂ. ಮೌಲ್ಯದ ಅಮಾನ್ಯಗೊಂಡ ಹಳೆ ನೋಟುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಪಡೆದ ಪೊಲೀಸರು ಕಟೋದರ ಪ್ರದೇಶದಲ್ಲಿ ವಾಹನಗಳ ತಪಾಸಣೆ ನಡೆಸಿದಾಗ ಕಾರೊಂದರಲ್ಲಿ 1000 ರೂ. ಮತ್ತು 500 ರೂ. ಮುಖಬೆಲೆಯ ಅಮಾನ್ಯಗೊಂಡ ನೋಟುಗಳು ಪತ್ತೆಯಾಗಿವೆ ಎಂದು ಪೊಲೀಸ್ ಪ್ರಕಟನೆಯಲ್ಲಿ ತಿಳಿಸಲಾಗಿದೆ. 500 ರೂ. ಮುಖಬೆಲೆಯ 24,000 ನೋಟುಗಳು ಮತ್ತು 1000 ರೂ. ಮುಖಬೆಲೆಯ 21,600 ನೊಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ ಕ್ರಮವಾಗಿ 1.20 ಕೋಟಿ ರೂ. ಹಾಗೂ 2.16 ಕೋಟಿ ರೂ. ಆಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಬಂಧಿತ ಆರೋಪಿಗಳನ್ನು ಗಗನ್ ಸಿನ್ಹ ರಾಜಪೂತ್, ಮುಹಮ್ಮದ್ ಅಲಿ ಶೇಕ್ ಹಾಗೂ ಲತೀಫ್ ಶೇಕ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಪ್ರಕಟನೆಯಲ್ಲಿ ತಿಳಿಸಿದಲಾಗಿದೆ.