ಕೇರಳ ನೆರೆ ಹಾವಳಿ ನೆರವಿಗೆ ಭಾರತದಿಂದ ಕೋರಿಕೆ ಬಂದಿಲ್ಲ: ವಿಶ್ವಸಂಸ್ಥೆ

Update: 2018-08-18 17:11 GMT

ವಿಶ್ವಸಂಸ್ಥೆ, ಆ.18: ಮಳೆ ಹಾಗೂ ನೆರೆ ಹಾವಳಿಯಿಂದ ಜರ್ಝರಿತವಾಗಿರುವ ಕೇರಳದಲ್ಲಿ ಆಗಿರುವ ನಾಶನಷ್ಟದ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರ್ರಸ್, ಕೇರಳದ ಪರಿಸ್ಥಿತಿಯನ್ನು ವಿಶ್ವಸಂಸ್ಥೆ ನಿಕಟವಾಗಿ ಗಮನಿಸುತ್ತಿದೆ. ಆದರೆ ಭಾರತದಿಂದ ಇದುವರೆಗೆ ನೆರವಿಗೆ ಕೋರಿಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ನಮ್ಮ ಮಾನವೀಯ ನೆರವು ವಿಭಾಗದ ಸಹೋದ್ಯೋಗಿಗಳು ಹಾಗೂ ಭಾರತದಲ್ಲಿರುವ ತಂಡವು ಕೇರಳದ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ. ಭಾರತದಲ್ಲಿ ನೆರೆಹಾವಳಿಯಿಂದ ಉಂಟಾಗಿರುವ ಜೀವನಷ್ಟ, ವಿನಾಶ ಹಾಗೂ ನೆರೆಹಾವಳಿ ಸಂತ್ರಸ್ತರ ಸ್ಥಳಾಂತರ ಸಮಸ್ಯೆ ಕುರಿತು ವಿಶ್ವಸಂಸ್ಥೆ ವಿಷಾದ ವ್ಯಕ್ತಪಡಿಸುತ್ತದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ವಕ್ತಾರರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

 ಭಾರತವು ನೆರವಿಗಾಗಿ ಇದುವರೆಗೆ ನೇರವಾಗಿ ಕೋರಿಕೆ ಮಂಡಿಸಿಲ್ಲ. ಭಾರತವು ಪ್ರಾಕೃತಿಕ ವಿಕೋಪದ ನಿರ್ವಹಣೆಗೆ ಸಮರ್ಥವಾದ ತಂಡವೊಂದನ್ನು ಹೊಂದಿದೆ. ಆದರೂ ನಾವು ಭಾರತದಲ್ಲಿರುವ ಸ್ಥಾನೀಯ ಸಂಯೋಜಕರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರು ಸಂತ್ರಸ್ತ ಪ್ರದೇಶದಲ್ಲಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿರುವ ತಂಡವನ್ನು ನಿಕಟವಾಗಿ ಗಮನಿಸುತ್ತಿದ್ದಾರೆ ಎಂದವರು ತಿಳಿಸಿದ್ದಾರೆ. ಅಂತರ್‌ಜಾಲದ ಮೂಲಕ ಸಾರ್ವಜನಿಕ ದೇಣಿಗೆ ಸಂಗ್ರಹಿಸುವ ಭಾರತದ ಬೃಹತ್ ಅಂತರ್ಜಾಲ ಸೈಟ್ ಆಗಿರುವ ‘ಕೆಟೊ’ ಈಗಾಗಲೇ ನೆರೆ ಸಂತ್ರಸ್ತರಿಗೆ ನೆರವಾಗಲು ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News