ವಾಜಪೇಯಿ ಬಗ್ಗೆ ಟೀಕೆ: ಮನೆಯಿಂದ ಹೊರಗೆಳೆದು ಪ್ರೊಫೆಸರ್‌ಗೆ ಹಲ್ಲೆ
ಪಾಟ್ನ, ಆ.18: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಮಾಡಿದ್ದಾರೆ ಎಂಬ ಕಾರಣಕ್ಕೆ ಬಿಹಾರದ ಮೋತಿಹರಿ ಸೆಂಟ್ರಲ್ ವಿವಿಯ ಪ್ರೊಫೆಸರ್ ಮೇಲೆ ಗುಂಪೊಂದು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಮೂರನೇ ಮಹಡಿಯಲ್ಲಿರುವ ತನ್ನ ಮನೆಯಿಂದ ತನ್ನನ್ನು ಹೊರಗೆಳೆದು ತಂದ ಗುಂಪೊಂದು ತೀವ್ರವಾಗಿ ಥಳಿಸಿದ್ದು ಜೀವಂತ ದಹಿಸಲೂ ಮುಂದಾಗಿದ್ದರು ಎಂದು ಪ್ರೊ ಸಂಜಯ್ ಕುಮಾರ್ ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಪಾಟ್ನಾದ ಎಐಐಎಂಎಸ್‌ಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
ವಾಜಪೇಯಿ ವಿರುದ್ಧ ಟೀಕೆ ಮಾಡಿರುವುದಲ್ಲದೆ ವಿವಿಯ ಉಪಕುಲಪತಿ ವಿರುದ್ಧ ಈ ಹಿಂದೆ ಟೀಕೆ ಮಾಡಿರುವ ಬಗ್ಗೆ ತನ್ನನ್ನು ತರಾಟೆಗೆತ್ತಿಕೊಂಡ ಗುಂಪು ತೀವ್ರವಾಗಿ ಥಳಿಸಿದೆ. ಉಪಕುಲಪತಿ ವಿರುದ್ಧ ಪ್ರತಿಭಟನೆ ನಡೆಸದಂತೆ ತಿಳಿಸಿದ್ದ ಕೆಲವರು ಹಲ್ಲೆಗೆ ಮೊದಲು ತನಗೆ ದೂರವಾಣಿ ಕರೆ ಮಾಡಿ ಜೀವಬೆದರಿಕೆ ಒಡ್ಡಿದ್ದರು ಎಂದು ಸಂಜಯ್ ಕುಮಾರ್ ತಿಳಿಸಿದ್ದಾರೆ.
ವಿವಿಯ ಬೋಧಕರ ನೇಮಕಾತಿ ಸಂದರ್ಭ ಮೀಸಲಾತಿ ನೀಡುವ ವಿಷಯದಲ್ಲಿ ವಿವಿಯ ಆಡಳಿತ ಮಂಡಳಿಯ ನಿರ್ಧಾರವನ್ನು ವಿರೋಧಿಸಿ ಮೇ 29ರಂದು ಅಧ್ಯಾಪಕರ ಒಂದು ವರ್ಗ ಧರಣಿ ಪ್ರತಿಭಟನೆ ನಡೆಸಿತ್ತು. ಆ ಬಳಿಕ ಉಪಕುಲಪತಿ ಹಾಗೂ ಕೆಲವು ಪ್ರೊಫೆಸರ್ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು ಎನ್ನಲಾಗಿದೆ. ಈ ಪ್ರತಿಭಟನೆಗೂ ಪ್ರೊಫೆಸರ್ ಕುಮಾರ್ ಮೇಲಿನ ಹಲ್ಲೆ ಪ್ರಕರಣಕ್ಕೂ ಸಂಬಂಧವಿರಬಹುದು ಎಂದು ಕುಮಾರ್ ಅವರ ಸಹೋದ್ಯೋಗಿ ಮೃತ್ಯುಂಜಯ್ ಯಾದವ್ ಹೇಳಿದ್ದಾರೆ. ಉಪಕುಲಪತಿ ಹುದ್ದೆಗೆ ಆಯ್ಕೆಯಾಗುವಾಗ ಅವರು ತಾವು ಜರ್ಮನಿ ವಿವಿಯಿಂದ ಪಿಎಚ್‌ಡಿ ಪಡೆದಿರುವುದಾಗಿ ಹೇಳಿದ್ದರು. ಆದರೆ ಅವರು ರಾಜಸ್ತಾನದ ಕಾಲೇಜಿನಿಂದ ಪದವಿ ಪಡೆದಿರುವುದು ನಂತರ ತಿಳಿದುಬಂದಿದೆ. ಅವರು ಹೇಳಿರುವ ಸುಳ್ಳಿನ ಬಗ್ಗೆ ಪ್ರಶ್ನಿಸಿರುವುದಕ್ಕೆ ಕೆಲವು ಪ್ರೊಫೆಸರ್‌ಗಳ ವಿರುದ್ಧ ಸೇಡಿನ ಭಾವನೆ ಹೊಂದಿದ್ದಾರೆ ಎಂದು ಯಾದವ್ ದೂರಿದ್ದಾರೆ.
ಪ್ರೊಫೆಸರ್‌ಗೆ ಹಲ್ಲೆ ನಡೆಸಿರುವುದು ಖಂಡನೀಯ. ಆರೆಸ್ಸೆಸ್ ಬೆಂಬಲಿತ ಉಪಕುಲಪತಿಯ ಪರವಾಗಿ ಆರೆಸ್ಸೆಸ್ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಪ್ರೊಫೆಸರ್ ಮೇಲೆ ಪೆಟ್ರೋಲ್ ಸುರಿದು ದಹಿಸಲೂ ಯತ್ನಿಸಿದ್ದಾರೆ. ಇಷ್ಟಾದರೂ ಬಿಹಾರ ಸರಕಾರ ಸುಮ್ಮನಿದೆ ಎಂದು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಟೀಕಿಸಿದ್ದಾರೆ.