ಹೆತ್ತವರ ವಶದಿಂದ ಪತ್ನಿಯನ್ನು ಮುಕ್ತಗೊಳಿಸಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯಿಂದ ಸುಪ್ರೀಂಗೆ ಅರ್ಜಿ

Update: 2018-08-18 17:26 GMT

ಹೊಸದಿಲ್ಲಿ, ಆ.18: ಹಿಂದೂ ಯುವತಿಯನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಛತ್ತೀಸ್‌ಗಢದ ವ್ಯಕ್ತಿಯೊಬ್ಬ, ಇದೀಗ ತನ್ನ ಪತ್ನಿಯನ್ನು ಆಕೆಯ ಪೋಷಕರು ಗೃಹಬಂಧನಲ್ಲಿರಿಸಿದ್ದು, ಅವಳನ್ನು ಬಿಡುಗಡೆ ಮಾಡಬೇಕೆಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.

ಮುಹಮ್ಮದ್ ಇಬ್ರಾಹಿಂ ಸಿದ್ದಿಕಿ (33) ಎಂಬ ವ್ಯಕ್ತಿ ಎರಡು ವರ್ಷದಿಂದ ಹಿಂದೂ ಯುವತಿಯೊಂದಿಗೆ ಸಂಬಂಧ ಹೊಂದಿದ್ದು ಬಳಿಕ ಆಕೆಯನ್ನು ವಿವಾಹವಾಗುವ ಉದ್ದೇಶದಿಂದ ಈ ವರ್ಷದ ಫೆ.23ರಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಆರ್ಯನ್ ಆರ್ಯ ಎಂದು ಬದಲಿಸಿಕೊಂಡಿದ್ದ. ಆದರೆ ಮದುವೆಯಾದ ಬಳಿಕ ತನ್ನ ಪತ್ನಿಯನ್ನು ಆಕೆಯ ಪೋಷಕರು ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದು ಅವಳನ್ನು ಬಿಡುಗಡೆ ಮಾಡಬೇಕೆಂದು ಕೋರಿ ಛತ್ತೀಸ್‌ಗಢ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

ಆದರೆ, ಮಹಿಳೆ ಪ್ರಾಪ್ತ ವಯಸ್ಕಳಾಗಿದ್ದು ಸ್ವ ಇಚ್ಛೆಯಿಂದಲೇ ವಿವಾಹವಾಗಿದ್ದಾಳೆ ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸದ ಹೈಕೋರ್ಟ್, ಸಿದ್ದಿಕಿಯ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಿದ್ದಿಕಿ ಸುಪ್ರೀಂಕೋರ್ಟನಲ್ಲಿ ಮೇಲ್ಮನವಿ ಸಲ್ಲಿಸಿದ್ದಾನೆ.

ಹೈಕೋರ್ಟ್ ತನ್ನ ಪತ್ನಿಗೆ ಪೋಷಕರ ಜೊತೆ ತೆರಳುವುದು ಅಥವಾ ಹಾಸ್ಟೆಲ್‌ನಲ್ಲಿ ಇರುವುದು ಎಂಬ ಎರಡು ಆಯ್ಕೆಯನ್ನು ನೀಡಿರುವುದು ಸರಿಯಲ್ಲ. ಅಲ್ಲದೆ ತನ್ನ ಪತ್ನಿ ಹೆತ್ತವರ ಮನೆಗೆ ತೆರಳಿದ್ದು ತನಗೆ ವಿವಾಹವಾಗಿರುವುದನ್ನು ಅವರಿಗೆ ತಿಳಿಸಿಲ್ಲ. ಆದರೆ ಬಳಿಕ ಹೆತ್ತವರಿಗೆ ಮಗಳ ಮದುವೆ ವಿಚಾರ ತಿಳಿದು ಬಂದಾಗ ಆಕೆ ತವರು ಮನೆಯನ್ನು ಬಿಟ್ಟು ಬಂದು ಜೂನ್ 30ರ ರಾತ್ರಿ ತನ್ನ ಮನೆಗೆಂದು ಬಂದಿದ್ದಾಳೆ. ಈ ಸಂದರ್ಭ ಆಕೆಯನ್ನು ಪತ್ತೆಹಚ್ಚಿದ ಪೊಲೀಸರು ಮೊದಲು ಪೊಲೀಸ್ ಠಾಣೆಗೆ ಕರೆದೊಯ್ದು ಬಳಿಕ ಅನಾಥ ಮಹಿಳೆಯರ ಆಶ್ರಮಕ್ಕೆ ಆಕೆಯನ್ನು ದಾಖಲಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News