ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೂ ಕೇರಳ ನೆರೆಗೂ ನಂಟು ಕಲ್ಪಿಸಿದ ಆರೆಸ್ಸೆಸ್‌ನ ಎಸ್.ಗುರುಮೂರ್ತಿ!

Update: 2018-08-18 17:26 GMT

ಹೊಸದಿಲ್ಲಿ,ಆ.18: ಕೇರಳದಲ್ಲಿ ಪ್ರವಾಹಗಳಿಗೆ ಕಾರಣವೇನು? ಟ್ವಿಟರ್‌ನಲ್ಲಿ ಕೆಲವರು ಹೇಳಿರುವಂತೆ ಮಹಿಳೆಯರು ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸಲು ಬಯಸಿದ್ದಾರೆ ಮತ್ತು ಇದು ಅಯ್ಯಪ್ಪ ಸ್ವಾಮಿಯನ್ನು ಎಷ್ಟೊಂದು ಕುಪಿತಗೊಳಿಸಿದೆಯೆಂದರೆ ಆತ ಬೃಹತ್ ವಿನಾಶವನ್ನುಂಟು ಮಾಡಿದ್ದಾನೆ!

ಈ ತಿಂಗಳ ಆರಂಭದಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಋತುಚಕ್ರವನ್ನು ಹೊಂದಿರುವ ಮಹಿಳೆಯರ ಪ್ರವೇಶ ನಿಷೇಧವನ್ನು ಪ್ರಶ್ನಿಸಿರುವ ಅರ್ಜಿಗಳ ಕುರಿತಂತೆ ತನ್ನ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಕಾದಿರಿಸಿತ್ತು. ಕೇರಳದಲ್ಲಿ ಈಗ ಪ್ರವಾಹಗಳು ಉಂಟಾಗಲು ಇದು ಕಾರಣವೆನ್ನುವುದು ಈ ಟ್ವಟರಿಗರ ವಾದ.

 ‘ಪ್ರಕರಣ ಮತ್ತು ಶಬರಿಮಲೆಯಲ್ಲಿ ಈಗ ಸಂಭವಿಸುತ್ತಿರುವುದರ ನಡುವೆ ಏನಾದರೂ ಸಂಬಂಧವಿದೆಯೇ ಎನ್ನುವುದನ್ನು ನೋಡಲು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಬಯಸಬಹುದು. ಇಂತಹ ಸಂಬಂಧದ ಅವಕಾಶ ಮಿಲಿಯನ್‌ನಲ್ಲಿ ಕೇವಲ ಒಂದರಷ್ಟಿದ್ದರೂ ಪ್ರಕರಣದಲ್ಲಿ ಅಯ್ಯಪ್ಪ ಸ್ವಾಮಿಯ ವಿರುದ್ಧ ತೀರ್ಪನ್ನು ಜನರು ಬಯಸುವುದಿಲ್ಲ ’ ಎಂದು ಆರೆಸ್ಸೆಸ್ ಸಿದ್ಧಾಂತಿ ಮತ್ತು ಆರ್‌ಬಿಐ ಆಡಳಿತ ಮಂಡಳಿಯ ಸದಸ್ಯ ಎಸ್.ಗುರುಮೂರ್ತಿ ಶನಿವಾರ ಟ್ವೀಟಿಸಿದ್ದಾರೆ. ಇದರ ಬೆನ್ನಿಗೇ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

‘ಇದನ್ನು ಯಾವುದೇ ಧಾರ್ಮಿಕ ವಿಷಯದೊಂದಿಗೆ ತಳುಕು ಹಾಕಬೇಡಿ. ಇದು ಒಳ್ಳೆಯದಲ್ಲ. ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ. ವಿಪತ್ತಿಗೆ ಸಿಲುಕಿರುವ ಜನರಿಗೆ ನೆರವಾಗುವುದು ಈಗಿನ ಅಗತ್ಯವಾಗಿದೆ. ಯಾವುದಾದರೂ ರೀತಿಯಲ್ಲಿ ಸಹಾಯ ಮಾಡುವುದು ನಿಮಗೆ ಸಾಧ್ಯವಿದ್ದರೆ ಮೊದಲು ಆ ಕೆಲಸವನ್ನು ಮಾಡಿ’ ಎಂದು ಮಣಿಕಂಠನ್ ಸಲಹೆ ನೀಡಿದ್ದರೆ, ‘ಇಂತಹ ಸಮಯದಲ್ಲಿ ಈ ಬಗ್ಗೆ ಮಾತನಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಜನರು ಸಾಯುತ್ತಿದ್ದಾರೆ,ನಿರ್ವಸಿತರಾಗಿದ್ದಾರೆ ಮತ್ತು ನೀವು ಭಾರತಿರಾಜಾ ಚಿತ್ರಗಳ ಗ್ರಾಮಸ್ಥನಂತೆ ಮಾತನಾಡುತ್ತಿದ್ದೀರಿ ’ ಎಂದು ಸುಧೀರ್ ಶ್ರೀನಾಥ್ ಕುಟುಕಿದ್ದಾರೆ.

 ಇಂತಹ ಟೀಕೆಗಳು ಪ್ರವಾಹದೋಪಾದಿಯಲ್ಲಿ ಹರಿದಾಡುತ್ತಿವೆ. ಆದರೆ ಗುರುಮೂರ್ತಿ ತನ್ನದೇ ರೀತಿಯಲ್ಲಿ ನೆಟ್ಟಿಗರನ್ನು ಸಮಾಧಾನಿಸಲು ವಿಫಲ ಪ್ರಯತ್ನವನ್ನು ನಡೆಸಿದ್ದಾರೆ.

‘ಅಯ್ಯಪ್ಪ ಸ್ವಾಮಿಗೂ ಪ್ರವಾಹಕ್ಕೂ ಸಂಬಂಧದ ಅವಕಾಶ ಮಿಲಿಯನ್‌ನಲ್ಲಿ ಕೇವಲ ಒಂದರಷ್ಟಿದ್ದರೂ ಪ್ರಕರಣದಲ್ಲಿ ಅಯ್ಯಪ್ಪ ಸ್ವಾಮಿಯ ವಿರುದ್ಧ ತೀರ್ಪನ್ನು ಜನರು ಬಯಸುವುದಿಲ್ಲ ಎಂದಷ್ಟೇ ನಾನು ಹೇಳಿದ್ದೇನೆ. ಇದು ಜನರ ನಂಬಿಕೆಯ ಕುರಿತಾಗಿದೆ. ನಾನು ಅಯ್ಯಪ್ಪ ಸ್ವಾಮಿಯ ಭಕ್ತನಲ್ಲ,ನಾನು ಶಬರಿಮಲೆಗೆ ಹೋಗುವುದಿಲ್ಲ ಎನ್ನುವುದು ನಿಮಗೆ ಗೊತ್ತಿರಲಿ ’ಎಂದು ಅವರು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News