ದಿಢೀರ್ ನಿವೃತ್ತಿ ನಿರ್ಧಾರ ಹಿಂದಿನ ಕಾರಣ ಬಹಿರಂಗಪಡಿಸಿದ ಡಿವಿಲಿಯರ್ಸ್

Update: 2018-08-18 18:22 GMT

     ಜೋಹಾನ್ಸ್‌ಬರ್ಗ್ , ಆ.17: ನಾಲ್ಕು ತಿಂಗಳ ಹಿಂದೆ ಅಂತರ್‌ರಾಷ್ಟ್ರಿಯ ಕ್ರಿಕೆಟ್‌ನಿಂದ ದಿಢೀರನೇ ನಿವೃತ್ತಿ ಪ್ರಕಟಿಸಿದ ದಕ್ಷಿಣ ಆಫ್ರಿಕದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ನೀಡಿದ್ದರು.

ದ.ಆಫ್ರಿಕದ ಪರ 114 ಟೆಸ್ಟ್, 228 ಏಕದಿನ ಹಾಗೂ 78 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ ಬಳಿಕ ಡಿವಿಲಿಯರ್ಸ್ ನಿವೃತ್ತಿ ಘೋಷಿಸಿದ್ದರು.

ತನ್ನ ದಿಢೀರ್ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ ಡಿವಿಲಿಯರ್ಸ್, ‘‘ಅಭಿಮಾನಿಗಳು, ತಂಡ ಹಾಗೂ ಕೋಚ್‌ಗಳಿಂದ ಉತ್ತಮ ಪ್ರದರ್ಶನಕ್ಕಾಗಿ ತೀವ್ರ ಒತ್ತಡ ಎದುರಿಸುತ್ತಿದ್ದೆ. ತನ್ನಿಂದ ಕ್ರಿಕೆಟ್ ಅಭಿಮಾನಿಗಳು ತುಂಬಾ ನಿರೀಕ್ಷೆ ಮಾಡುತ್ತಿದ್ದರು. ಆದರೆ, ನನಗೆ ಪಂದ್ಯದತ್ತ ಹೆಚ್ಚು ಗಮನ ನೀಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಇಂತಹ ಕಠಿಣ ನಿರ್ಧಾರಕ್ಕೆ ಬರಬೇಕಾಯಿತು. ನಾನೀಗ ಕ್ರಿಕೆಟ್ ಸಂಬಂಧಿತ ಎಲ್ಲ ಚಟುವಟಿಕೆಗಳಿಂದ ದೂರವಿದ್ದೇನೆ. ಆದರೆ, ನಿವೃತ್ತಿ ನಿರ್ಧಾರದಿಂದ ನನಗೆ ಖಂಡಿತವಾಗಿಯೂ ಬೇಸರವಿಲ್ಲ’’ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಡಿವಿಲಿಯರ್ಸ್ ಈ ವರ್ಷದ ಎಪ್ರಿಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. ತನ್ನ ವೃತ್ತಿಜೀವನದ ಕೊನೆಯ ವರ್ಷದಲ್ಲಿ ಕ್ರಿಕೆಟ್ ತಂಡದಿಂದ ಒಳ-ಹೊರಗೆ ಹೋಗುತ್ತಿದ್ದ ಡಿವಿಲಿಯರ್ಸ್ ಗಾಯದ ಸಮಸ್ಯೆ ಜೊತೆಗೆ  ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಬೇಕಾದ ಅಗತ್ಯವನ್ನು ಎದುರಿಸಬೇಕಾಯಿತು. ಡಿವಿಲಿಯರ್ಸ್ 2004ರಲ್ಲಿ ದಕ್ಷಿಣ ಆಫ್ರಿಕದ ಪರ ಚೊಚ್ಚಲ ಪಂದ್ಯ ವನ್ನಾಡಿದ್ದರು. ಆನಂತರ ಟೆಸ್ಟ್‌ನಲ್ಲಿ 8,765 ರನ್, ಏಕದಿನದಲ್ಲಿ 9,577 ರನ್ ಹಾಗೂ ಟ್ವೆಂಟಿ-20ಯಲ್ಲಿ 1,672 ರನ್ ಗಳಿಸಿದ್ದಾರೆ.

ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 50ಕ್ಕೂ ಅಧಿಕ ಸರಾಸರಿ ಕಾಯ್ದುಕೊಂಡಿದ್ದ 34ರ ಹರೆಯದ ಡಿವಿಲಿಯರ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 278 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News