ಲಿಯಾಂಡರ್ ಪೇಸ್ ಅನುಪಸ್ಥಿತಿಯಲ್ಲಿ ಭಾರತದ ಟೆನಿಸ್ ತಂಡ ಆಯ್ಕೆ ಅಂತಿಮ

Update: 2018-08-18 18:27 GMT

 ಪಾಲೆಂಬಾಂಗ್, ಆ.18: ಹಿರಿಯ ಆಟಗಾರ ಲಿಯಾಂಡರ್ ಪೇಸ್ ದಿಢೀರನೇ ಏಶ್ಯನ್ ಗೇಮ್ಸ್‌ನಿಂದ ಹಿಂದೆ ಸರಿದ ಕಾರಣ ಗೊಂದಲಕ್ಕೆ ಸಿಲುಕಿದ್ದ ಭಾರತದ ಟೆನಿಸ್ ತಂಡದ ಆಯ್ಕೆಯನ್ನು ಏಶ್ಯನ್ ಗೇಮ್ಸ್ ಆರಂಭವಾಗಲು 24 ಗಂಟೆಗಿಂತ ಮೊದಲು ಅಂತಿಮಗೊಳಿಸಲಾಗಿದೆ.

ತಂಡದ ಆಯ್ಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪೇಸ್ ಕೊನೆಯ ಕ್ಷಣದಲ್ಲಿ ಗೇಮ್ಸ್‌ನಿಂದ ಹಿಂದೆ ಸರಿದ ಕಾರಣ ನಾಯಕ ಹಾಗೂ ಕೋಚ್ ಝೀಶನ್ ಅಲಿ ಸಂಕಷ್ಟಕ್ಕೆ ಸಿಲುಕಿದ್ದರು.

ಸಿಂಗಲ್ಸ್ ಆಟಗಾರರು ಹಾಗೂ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಅವರನ್ನೊಳಗೊಂಡ ಪುರುಷರ ಡಬಲ್ಸ್ ಜೋಡಿಯನ್ನು ಈಗಾಗಲೇ ಅಂತಿಮಗೊಳಿಸಲಾಗಿತ್ತು. ಆದರೆ, ಮತ್ತೊಂದು ಪುರುಷರ ಡಬಲ್ಸ್ ಜೋಡಿ, ಮಿಶ್ರ ಡಬಲ್ಸ್ ಜೋಡಿಯನ್ನು ಶುಕ್ರವಾರ ಸಂಜೆ ವೇಳೆ ನಿರ್ಧರಿಸಲಾಯಿತು.

ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಸ್ಪರ್ಧೆಗಳು ಭಾರತಕ್ಕೆ ಗೇಮ್ಸ್‌ನಲ್ಲಿ ಯಾವಾಗಲೂ ನಿರ್ಣಾಯಕವಾಗಿದೆ. 4 ವರ್ಷಗಳ ಹಿಂದೆ ಟೆನಿಸ್‌ನಲ್ಲಿ 5 ಪದಕಗಳು ಲಭಿಸಿದ್ದವು. ಮಿಶ್ರ ಡಬಲ್ಸ್‌ನಲ್ಲಿ ಚಿನ್ನ, ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿ ಹಾಗೂ ಕಂಚು, ಮಹಿಳೆಯರ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತ್ತು.

ರಾಮ್‌ಕುಮಾರ್ ರಾಮನಾಥನ್ ಅವರು ಪ್ರಜ್ಞೇಶ್ ಗುಣೇಶ್ವರನ್ ಸಿಂಗಲ್ಸ್ ಪಂದ್ಯವನ್ನಾಡಲಿದ್ದಾರೆ. ಪ್ರಜ್ಞೇಶ್ ಅವರು ಸುಮಿತ್ ನಗಾಲ್‌ರೊಂದಿಗೆ ಎರಡನೇ ಡಬಲ್ಸ್ ಪಂದ್ಯ ಆಡಲಿದ್ದಾರೆ.

ಪೇಸ್ ಅನುಪಸ್ಥಿತಿಯು ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಕೋಚ್ ಅಲಿ ಈಗಾಗಲೇ ಅಭಿಪ್ರಾಯಪಟ್ಟಿದ್ದಾರೆ. ಮಹಿಳಾ ವಿಭಾಗದಲ್ಲಿ ಸಾನಿಯಾ ಮಿರ್ಝಾರ ಅನುಪಸ್ಥಿತಿ ಎದ್ದುಕಾಣುತ್ತಿದೆ.ಮಿರ್ಝಾ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಈ ಬಾರಿಯ ಏಶ್ಯಾ ಗೇಮ್ಸ್‌ನಲ್ಲಿ ಆಡುತ್ತ್ತಿಲ್ಲ. ಸಿಂಗಲ್ಸ್ ಪಂದ್ಯವನ್ನಾಡಲಿರುವ ಅಂಕಿತಾ ರೈನಾ ಹಾಗೂ ಕರ್ಮಾನ್ ಕೌರ್ ಅವರು ಕ್ರಮವಾಗಿ ಬೋಪಣ್ಣ ಹಾಗೂ ಶರಣ್ ಅವರೊಂದಿಗೆ ಮಿಶ್ರ ಡಬಲ್ಸ್ ಪಂದ್ಯವನ್ನು ಆಡಲಿದ್ದಾರೆ.

ಡಬಲ್ಸ್ ಆಟಗಾರ್ತಿ ಪ್ರಾರ್ಥನಾರನ್ನು ಮಿಶ್ರ ಡಬಲ್ಸ್‌ಗೆನಿರ್ಲಕ್ಷಿಸಲಾಗಿದ್ದು, ಮೂರು ಇವೆಂಟ್‌ಗಳಲ್ಲಿ ಆಡಲಿರುವ ಅಂಕಿತಾರೊಂದಿಗೆ ಪ್ರಾರ್ಥನಾ ಡಬಲ್ಸ್ ಪಂದ್ಯವನ್ನಾಡಲಿದ್ದಾರೆ.

ಋತುಜಾ ಬೋಂಸ್ಲೆ ಹಾಗೂ ಪ್ರಾಂಜಲಾ ಇನ್ನೋರ್ವ ಡಬಲ್ಸ್ ಜೋಡಿಯಾಗಿದ್ದಾರೆ. ಅಗ್ರ ಆಟಗಾರರಾದ ಜಪಾನ್‌ನ ಕೀ ನಿಶಿಕೊರಿ, ದ.ಕೊರಿಯಾದ ಹಿಯೊನ್ ಚುಂಗ್ ಹಾಗೂ ಕಝಕ್‌ಸ್ತಾನದ ಮಿಖೈಲ್ ಕುಕುಶ್ಕಿನ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಭಾರತ ನಂ.1 ಸಿಂಗಲ್ಸ್ಸ್ ಆಟಗಾರ ಯೂಕಿ ಭಾಂಬ್ರಿ ಏಶ್ಯನ್ ಗೇಮ್ಸ್ ಜೊತೆಗೆ ಯುಎಸ್ ಓಪನ್‌ನಿಂದಲೂ ದೂರ ಉಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News