ಹೊಸ ಜಿಡಿಪಿ ಅಂಕಿಅಂಶ: ಕೇಂದ್ರ- ಕಾಂಗ್ರೆಸ್ ನಡುವೆ ಗುದ್ದಾಟ

Update: 2018-08-19 08:47 GMT

ಹೊಸದಿಲ್ಲಿ, ಆ.19: ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅಂದರೆ 2006-07ರಲ್ಲಿ ಭಾರತ ಎರಡಂಕಿಯ ಪ್ರಗತಿ ಸಾಧಿಸಿದ್ದನ್ನು ಜಿಡಿಪಿ ಬ್ಯಾಕ್‌ ಸೀರಿಸ್ ಅಂಕಿಅಂಶಗಳು ಬೆಳಕಿಗೆ ತಂದ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಸಂತಸ ಮೂಡಿದೆ. ಆದರೆ ಸರ್ಕಾರ ಕಾಂಗ್ರೆಸ್ ಸಂಭ್ರಮಕ್ಕೆ ತಣ್ಣೀರೆರಚಿದ್ದು, "ಈ ಪ್ರಗತಿಯ ಅಂಶ ಯುಪಿಎ ಆಡಳಿತಾವಧಿಯ ಬೇಕಾಬಿಟ್ಟಿ ಸಾಲ, ಆರ್ಥಿಕತೆಯ ಅಸ್ಥಿರತೆ, ಅಧಿಕ ಹಣದುಬ್ಬರ ಮತ್ತು ದೋಷಪೂರಿತ ನೀತಿಯಿಂದಾಗಿ ಭಾರತದ ಆರ್ಥಿಕತೆ ಛಿದ್ರಗೊಳ್ಳುವ ಭೀತಿಯ ಐದು ಆರ್ಥಿಕತೆಗಳಲ್ಲೊಂದಾಗಿ ಬೆಳೆದದ್ದನ್ನು ಮುಚ್ಚಿಹಾಕಲು ಸಾಧ್ಯವಿಲ್ಲ" ಎಂದು ಕಟುವಾಗಿ ಹೇಳಿದೆ.

ಅರ್ಥಶಾಸ್ತ್ರಜ್ಞ ಸುದೀಪ್ತೊ ಮಂಡಲ್ ಕಳೆದ ತಿಂಗಳು ಸಲ್ಲಿಸಿರುವ ವರದಿಯನ್ನು ಸರ್ಕಾರ ಇನ್ನೂ ಅಂಗೀಕರಿಸಿಲ್ಲ. ಯುಪಿಎ ಸರ್ಕಾರ ಸಾಲದ ಮೂಲಕ ಪ್ರಗತಿಗೆ ಸಂಪನ್ಮೂಲ ಹೊಂದಿಸಿದೆ ಮತ್ತು ಈ ಅವಧಿಯಲ್ಲಿ ಬ್ಯಾಂಕ್‌ಗಳು ಬೇಕಾಬಿಟ್ಟಿ ಸಾಲ ನೀಡಿವೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಆಪಾದಿಸಿದ್ದಾರೆ.

2009-11ರ ಅವಧಿಯಲ್ಲಿ ಹಾಗೂ ಹಿಂದೆ ಇದ್ದ ಅಧಿಕ ಮಟ್ಟದ ಪ್ರಗತಿಗೆ ವಿತ್ತೀಯ ಕೊರತೆಯನ್ನು ಹೆಚ್ಚಿಸಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳು ಬೇಕಾಬಿಟ್ಟಿ ಸಾಲ ನೀಡುವ ಮೂಲಕ ಹಣಕಾಸು ನೆರವು ನೀಡಲಾಗಿದೆ. ಇದು ಬಳಿಕ ಭಾರಿ ಆರ್ಥಿಕ ಕುಸಿತಕ್ಕೆ ಕಾರಣವಾಯಿತು" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಹಣಕಾಸು ಸಚಿವಾಲಯದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಕೂಡಾ ಇದಕ್ಕೆ ದನಿಗೂಡಿಸಿ, "2009-14ರ ಅವಧಿಯಲ್ಲಿ ಹಣದುಬ್ಬರ ಶೇಕಡ 10.4ರಷ್ಟಿದ್ದರೆ ಈಗ 4.7 ಶೇ. ಇದೆ" ಎಂದು ಹೇಳಿದ್ದಾರೆ. ರಾಜೀವ್‌ ಗಾಂಧಿ ಅವಧಿಯಲ್ಲಿ ಗರಿಷ್ಠ ಅಂದರೆ ಶೇಕಡ 10.2ರಷ್ಟು ಪ್ರಗತಿ ಸಾಧಿಸಲೂ ಇಂಥದ್ದೇ ಕ್ರಮಗಳು ಕಾರಣ ಎಂದು ಅವರು ಆಪಾದಿಸಿದ್ದಾರೆ.

ಇದಕ್ಕೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ತಿರುಗೇಟು ನೀಡಿದ್ದು, "ಎನ್‌ಡಿಎ ಅಧಿಕಾರಾವಧಿಯಲ್ಲಿ ಪ್ರಗತಿ ದರ 5.7 ಶೇ. ಇದ್ದರೆ, ಯುಪಿಎ-1 ಮತ್ತು ಯುಪಿಎ-2ರ ಅವಧಿಯಲ್ಲಿ ಕ್ರಮವಾಗಿ ಶೇಕಡ 8.4 ಹಾಗೂ 7.7 ಆಗಿತ್ತು. ಮೋದಿ ಸರ್ಕಾರದ ಮೊದಲ ನಾಲ್ಕು ವರ್ಷಗಳಲ್ಲಿ ಇದು ಸರಾಸರಿ 7.35 ಶೇ. ಆಗಿದೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News