ನೆರೆಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ನವಜಾತ ಶಿಶುವಿನ ರಕ್ಷಣೆ

Update: 2018-08-19 15:30 GMT

ಇಡುಕ್ಕಿ, ಆ. 18: ಇಡುಕ್ಕಿ ಅಣೆಕಟ್ಟಿನ ಸಮೀಪ ಎರಡು ದಿನಗಳ ಹಿಂದೆ ರಾತ್ರಿಯಿಡಿ ತಟ ರಕ್ಷಣೆ ಹಾಗೂ ಸೇನಾ ಪಡೆ ಕಾರ್ಯಾಚರಣೆ ನಡೆಸಿ ನವಜಾತ ಶಿಶುವೊಂದನ್ನು ರಕ್ಷಿಸಿದೆ. ಇಡುಕ್ಕಿ ಅಣೆಕಟ್ಟು ಪ್ರದೇಶದಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿರುವ ಬಗ್ಗೆ ಮುಂಬೈ ತಟ ರಕ್ಷಣಾ ಪಡೆಯಿಂದ ಕರೆ ಬಂದ ಬಳಿಕ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ತಂಡದ ನೇತೃತ್ವ ವಹಿಸಿದ್ದ ಸೇನಾ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶಶಿಕಾಂತ್ ವಾಗ್ಮೊರೆ ತಿಳಿಸಿದ್ದಾರೆ.

ನಾವು ಕೊಚ್ಚಿಯಲ್ಲಿ ಕಮಾಂಡರ್‌ಗಳ ವಾರದ ಸಮಾವೇಶದಲ್ಲಿ ಪಾಲ್ಗೊಂಡಿದ್ದೆವು. ಈ ಸಂದರ್ಭ ಮುಂಬೈ ತಟ ರಕ್ಷಣಾ ಪಡೆಯ ಕಚೇರಿಯಿಂದ ಕರೆ ಬಂತು. ಇಡುಕ್ಕಿ ಅಣೆಕಟ್ಟಿನಲ್ಲಿ ನೀರು ಅಪಾಯದ ಮಟ್ಟ ಮೀರಿದೆ. ಆದುದರಿಂದ ಉತ್ತಮ ತಂಡವನ್ನು ಅಲ್ಲಿಗೆ ಕಳುಹಿಸುವಂತೆ ನಿರ್ದೇಶಿಸಲಾಗಿತ್ತು ಎಂದು ವಾಗ್ಮೋರೆ ತಿಳಿಸಿದ್ದಾರೆ. ಆಗಸ್ಟ್ 16ರಂದು ನಾವು ಆ ಪ್ರದೇಶಕ್ಕೆ ತಲುಪಿದೆವು. ನೆರೆಯಿಂದ ಆವೃತವಾದ ಮನೆಯೊಂದರಲ್ಲಿ ಮಹಿಳೆ ಹಾಗೂ ಅವರ ಕುಟುಂಬದ ಐದು ಮಂದಿ ಆಹಾರ, ನೀರು ಇಲ್ಲದೆ ಸಿಲುಕಿರುವುದಾಗಿ ಸ್ಥಳೀಯರು ತಿಳಿಸಿದರು. ಅಲ್ಲಿನ ಪೊಲೀಸರ ಮಾರ್ಗದರ್ಶನದೊಂದಿಗೆ ಆ ಸ್ಥಳವನ್ನು ರಾತ್ರಿ 10.30ಕ್ಕೆ ತಲುಪಿದೆವು ಎಂದು ಅವರು ವಿವರಿಸಿದ್ದಾರೆ.

‘‘ಆ ಕುಟುಂಬ ದುಸ್ಥಿತಿಯಲ್ಲಿ ಇತ್ತು. ತಮ್ಮನ್ನು ರಕ್ಷಿಸಲು ಯಾರಾದರೂ ಬರುತ್ತಾರೆ ಎಂಬ ನಿರೀಕ್ಷೆ ಕೂಡ ಅವರಿಗೆ ಇರಲಿಲ್ಲ. ಅಲ್ಲಿದ್ದ ನವ ಜಾತ ಶಿಶು ಹಾಗೂ ತಾಯಿಯ ವೈದ್ಯಕೀಯ ದೃಷ್ಟಿಯ ಹಿನ್ನೆಲೆಯಲ್ಲಿ ಬೆಳಗ್ಗೆ ವೈದ್ಯರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆವು.’’ ಎಂದು ಅವರು ತಿಳಿಸಿದ್ದಾರೆ. ಬೆಳಗ್ಗೆ ನೀರು ಕಡಿಮೆ ಆಗಿತ್ತು. ನಾವು ಆ ಕುಟಂಬವನ್ನು ದೋಣಿಗೆ ಹತ್ತಿಸಿಕೊಂಡೆವು. ಅನಂತರ ಸುರಕ್ಷಿತವಾದ ಪ್ರದೇಶಕ್ಕೆ ಕರೆದೊಯ್ದೆವು. ಈ ಸಂದರ್ಭ ಮಹಿಳೆ, ತನ್ನ ಗಂಡು ಮಗು ದೊಡ್ಡವನಾದ ಬಳಿಕ ಸೇನಾ ಪಡೆಗೆ ಸೇರಿಸುತ್ತೇನೆ ಎಂದು ತಿಳಿಸಿದರು ಎಂದು ವಾಗ್ಮೊರೆ ಹೇಳಿದ್ದಾರೆ.

ನೆರೆ ಸಂತ್ರಸ್ತರ ರಕ್ಷಣೆಗೆ ನೆರವಾದ ಇಸ್ರೋ ಉಪಗ್ರಹಗಳು

ಮಳೆಯ ರೌದ್ರ ನರ್ತನಕ್ಕೆ ಸಿಲುಕಿದ ಕೇರಳದಲ್ಲಿ ನೆರೆ ಪರಿಸ್ಥಿತಿ ಅವಲೋಕನ ಹಾಗೂ ಪರಿಹಾರ ಕಾರ್ಯಾಚರಣೆಗೆ ನೆರವು ನೀಡುವಲ್ಲಿ ಇಸ್ರೋದ ಐದು ಉಪಗ್ರಹಗಳು ಪ್ರಮುಖ ಪಾತ್ರ ವಹಿಸಿವೆ. ಭೂ ಪರಿವೀಕ್ಷಣೆ ಉಪಗ್ರಹಗಳಾದ ಓಶಿಯನ್‌ಸ್ಯಾಟ್-2, ರಿಸೋರ್ಸ್ ಸ್ಯಾಟ್-2, ಕಾರ್ಟೋಸ್ಯಾಟ್-2 ಹಾಗೂ 2ಎ, ಇನ್‌ಸ್ಯಾಟ್ 3ಡಿಆರ್ ಕಳುಹಿಸಿದ ನೈಜ ಚಿತ್ರಗಳು ನೆರೆ ಪೀಡಿತ ಪ್ರದೇಶಗಳನ್ನು ಗುರುತಿಸುವಲ್ಲಿ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸುವಲ್ಲಿ ನೆರವಾಗಿವೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಮಳೆ ಬರುತ್ತಿರುವಾಗ, ಮಳೆ ಬಂದ ನಂತರ ಜಲಾವೃತವಾಗುವ ಪ್ರದೇಶಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲು ಹಾಗೂ ಹವಾಮಾನ ಮುನ್ಸೂಚನೆಗೆ ಈ ಉಪಗ್ರಹಗಳ ದತ್ತಾಂಶ ಬಳಸಿಕೊಂಡೆವು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News