ನಾನು ಅಮಾಯಕ, ನನ್ನ ಕಿಸೆಯಲ್ಲಿ ಚಾಕ್ಲೆಟ್ ಇದ್ದುದೇ ಗಂಭೀರ ಹಲ್ಲೆಗೆ ಕಾರಣ: ಹಂಝ

Update: 2018-08-19 18:35 GMT

ಮಂಗಳೂರು, ಆ.19: ನಾನು ಅಮಾಯಕ, ನನ್ನ ಕಿಸೆಯಲ್ಲಿ ಐದು ಚಾಕ್ಲೆಟ್ ಗಳಿದ್ದವು ಇದನ್ನೇ ಶಂಕಿಸಿ, ಮಕ್ಕಳ ಕಳ್ಳ ಎಂದು ನನ್ನನ್ನು ಕಂಬಕ್ಕೆ ಕಟ್ಟಿ ಹಾಕಿದ ಸುಮಾರು 40 ಮಂದಿ ಇದ್ದ ತಂಡ ಗಂಭೀರ ಹಲ್ಲೆ ಮಾಡಿದೆ ಎಂದು ಹಲ್ಲೆಗೊಳಗಾದ ಕಾಟಿಪಳ್ಳ ನಿವಾಸಿ ಹಂಝ ಅವರು ದೂರಿದ್ದಾರೆ. 

ಘಟನೆಯ ವಿವರ

“ನಾನು ನನ್ನ ಸ್ನೇಹಿತನೊಂದಿಗೆ ಜಾಗದ ವಿಷಯಕ್ಕೆ ಸಂಬಂಧಿಸಿ ಗುರುಕಂಬಳಕ್ಕೆ ಹೋಗಿದ್ದೆ. ಈ ಸಂದರ್ಭ ನನ್ನ ಕಿಸೆಯಲ್ಲಿ 5 ಚಾಕ್ಲೆಟ್ ಗಳಿದ್ದವು. ಅದರಲ್ಲಿ ಒಂದನ್ನು ನಾನು ತಿಂದಿದ್ದು, ನನ್ನಲ್ಲಿರುವ ಚಾಕ್ಲೆಟ್ ಕಂಡ ಅಲ್ಲಿದ್ದ ಮಕ್ಕಳು ನಮ್ಮ ಹತ್ತಿರ ಬಂದರು ಹಾಗು ನನ್ನ ಸ್ಕೂಟರ್ ಹೊಸತಾಗಿದ್ದು, ಅದಕ್ಕೆ ಇನ್ನಷ್ಟೇ ನಂಬರ್ ಪ್ಲೇಟ್ ಆಗಬೇಕಿದೆ. ಈ ಸಂದರ್ಭ ಅಲ್ಲಿ ಗೊಂದಲದ ವಾತಾವರಣ ಉಂಟಾಯಿತು. ನನ್ನೊಂದಿಗಿದ್ದ ಸ್ನೇಹಿತ ಅಲ್ಲಿಂದ ಓಡಿ ಪರಾರಿಯಾಗಿದ್ದು ಇದು ಅಲ್ಲಿ ಸೇರಿದ್ದ ಗುಂಪಿನ ಆಕ್ರೋಶಕ್ಕೆ ಕಾರಣವಾಯಿತು. ಆಗ ಅಲ್ಲಿ ಸೇರಿದ್ದ ಗುಂಪು ನನ್ನ ಮೇಲೆ ಏಕಾಏಕಿ ದಾಳಿ ನಡೆಸಿ, ಗಂಭೀರವಾಗಿ ಹಲ್ಲೆ ಮಾಡಿದ್ದಲ್ಲದೆ, ಆತನನ್ನು ಕರೆ ತರಬೇಕು ಎಂದು ಒತ್ತಾಯಿಸಿ, ಕಂಬಕ್ಕೆ ಕಟ್ಟಿ ಹಾಕಿ ಗಂಭೀರ ಹಲ್ಲೆ ನಡೆಸಿದೆ. ಆತ ಬಾರದಿದ್ದಲ್ಲಿ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಸಿ, ಮಾನಸಿಕವಾಗಿ ನಿಂದಿಸಿ ಗಂಭೀರವಾಗಿ ಹಲ್ಲೆ ಮಾಡಿದೆ. ಈ ವೇಳೆ ನಾನು, ನನ್ನಿಂದ ಯಾವುದೇ ತಪ್ಪು ಆಗಿಲ್ಲ. ನನಗೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಅವರೊಂದಿಗೆ ಬೇಡಿಕೊಂಡರೂ ಅವರು ನನಗೆ ಹಲ್ಲೆ ನಡೆಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹಲ್ಲೆಗೊಳಗಾದ ಹಂಝ ಅವರು ಮಾಹಿತಿ ನೀಡಿದ್ದಾರೆ. 

ಘಟನೆಯ ಬಗ್ಗೆ ಮಾಹಿತಿ ಅರಿತ 'ಎಫ್ಎಫ್ಇ' ಸಂಘಟನೆಯ ಮುಖಂಡರು ಬಜ್ಪೆ ಠಾಣೆಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಸೂಕ್ತ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News